ಬೀಜಿಂಗ್, ಎ.27 (Daijiworld News/MB) : ವಿಶ್ವದಲ್ಲೇ ಮೊದಲು ಕೊರೊನಾ ಸೋಂಕು ಪತ್ತೆಯಾದ ಚೀನಾದಲ್ಲಿ ಮತ್ತೆ ಹೊಸದಾಗಿ 11 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು ಚೀನಾದಲ್ಲಿ ಸೋಂಕಿತರ ಸಂಖ್ಯೆ 82,827ಕ್ಕೆ ಏರಿಕೆಯಾಗಿದೆ. ಕಳೆದ ಹತ್ತು ದಿನಗಳಿಂದ ಚೀನಾದಲ್ಲಿ ಮೃತರ ಸಂಖ್ಯೆಯು 4,632 ರಿಂದ ಏರಿಕೆಯಾಗಿಲ್ಲ.
ಈ ಕುರಿತಾಗಿ ತಿಳಿಸಿರುವ ಆರೋಗ್ಯಾಧಿಕಾರಿಗಳು ಮತ್ತೆ ಹೊಸ ಕೊರೊನಾ ಪ್ರಕರಣಗಳು ಪತ್ತೆಯಾದ ಕಾರಣದಿಂದಾಗಿ ಪುನಃ ಜಾಗೃತಿಯ ಅವಶ್ಯಕತೆಯಿದೆ ಎಂದು ಎಚ್ಚರಿಕೆ ನೀಡಿದೆ. ಏತನ್ಮಧ್ಯೆ ಕೊರೊನಾ ಸೋಂಕಿನ ಯಾವುದೇ ಲಕ್ಷಣ ಇಲ್ಲದಿದ್ದರೂ ಸೋಂಕು ದೃಢಪಟ್ಟಿರುವ ಸುಮಾರು ಒಂದು ಸಾವಿರ ಪ್ರಕರಣಗಳ ಪರಿಶೀಲನೆ ನಡೆಸುತ್ತಿರುವ ಆರೋಗ್ಯ ಇಲಾಖೆ ಯಾವುದೇ ಲಕ್ಷಣವಿಲ್ಲದ ಇವರಿಂದ ಹಲವರಿಗೆ ಸೋಂಕು ಹರಡುತ್ತದೆ ಎಂದು ಹೇಳಿದ್ದಾರೆ.
ಹೊಸದಾಗಿ ದೃಢಪಟ್ಟ 11 ಪ್ರಕರಣಗಳ ಪೈಕಿ ಆರು ಪ್ರಕರಣಗಳು ಸ್ಥಳೀಯರಿಂದ ಹಾಗೂ ಐದು ಪ್ರಕರಣಗಳು ವಿದೇಶಿಯರಿಂದ ಬಂದ ಸೋಂಕಿನಿಂದ ಉಂಟಾಗಿವೆ.
ಚೀನಾದಲ್ಲಿ ಮೊದಲು ಕೊರೊನಾ ವೈರಸ್ ಪತ್ತೆಯಾದ ವುಹಾನ್ ಪ್ರಾಂತ್ಯದಲ್ಲಿ ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ಈ ಮೊದಲು ವರದಿಯಾಗಿದೆ.
ಇನ್ನು ಭಾರತ ಮತ್ತು ಪಾಕಿಸ್ಥಾನದಲ್ಲಿರುವ ಚೀನೀಯರನ್ನು ಚೀನಾಗೆ ವಾಪಾಸ್ ಕರೆತರಲು ಹಾಂಕಾಂಗ್ ಮುಂದಾಗಿದೆ.