ಇಸ್ಲಾಮಾಬಾದ್, ಎ.27 (Daijiworld News/MB) : ಕೊರೊನಾ ಸೋಂಕು ಹುಟ್ಟಿ ಮಾನವನ ಮೇಲೆ ದಾಳಿ ನಡೆಸಲು ಮಹಿಳೆಯರ ಅಸಭ್ಯತೆಯೇ ಕಾರಣ ಎಂದು ಪಾಕಿಸ್ತಾನದ ಮೌಲ್ವಿ ಮೌಲಾನಾ ತಾರಿಖ್ ಜಮೀಲ್ ಹೇಳಿದ್ದಾರೆ.
ನಿಧಿ ಸಂಗ್ರಹಕ್ಕೆ ಸಂಬಂಧಿಸಿ ಗುರುವಾರ ಪಾಕಿಸ್ತಾನ ಸುದ್ದಿ ವಾಹಿನಿಯೊಂದರ ನೇರಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಮ್ಮುಖದಲ್ಲೇ ಮಹಿಳೆಯರ ಕುರಿತಾಗಿ ಅವಹೇಳಕಾರಿಯಾಗಿ ಮಾತನಾಡಿದ್ದು ತೀವ್ರ ಆಕ್ಷೇಪಗಳು ವ್ಯಕ್ತವಾದ ಬೆನ್ನಲ್ಲೇ ಕ್ಷಮೆಯಾಚಿಸಿದ್ದಾರೆ.
ಇನ್ನು ಮೌಲ್ವಿ ಈ ರೀತಿ ಮಹಿಳೆಯರ ವಿರುದ್ಧವಾಗಿ ಮಾತಾಡಿದರು ಅದೇ ಕಾರ್ಯಕ್ರಮದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಚಕಾರ ಎತ್ತದಿರುವುದು ಭಾರೀ ಖಂಡನೆಗೆ ಕಾರಣವಾಗಿದೆ.
ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಮಹಿಳೆಯರನ್ನು ದೂಷಿಸಿ ಜಮೀಲ್ ನೀಡಿರುವ ಹೇಳಿಕೆಯನ್ನು ಖಂಡನೆ ಮಾಡಿದ್ದು ಜಮೀಲ್ ಅವರು ಮಹಿಳೆಯರ ವಿರುದ್ಧವಾಗಿ ನೀಡಿರುವ ಹೇಳಿಕೆ ಒಪ್ಪಲಾಗುವುದಿಲ್ಲ. ಇದು ಖಂಡನಾರ್ಹ. ಅದು ಕೂಡಾ ಸಾರ್ವಜನಿಕವಾಗಿ ಸುದ್ದಿ ವಾಹಿನಿಯಲ್ಲಿ ಇದು ಪ್ರಸಾರವಾಗಿರುವುದು ಖೇದಕರ ಎಂದು ಹೇಳಿದ್ದು ಪಾಕಿಸ್ತಾನದ ಪತ್ರಿಕೆ ಡಾನ್ ಕೂಡಾ ಈ ಹೇಳಿಕೆ ಖಂಡಿಸಿದ್ದು ತಮ್ಮ ಸಂಪಾದಕೀಯದಲ್ಲಿ ಟೀಕೆ ಮಾಡಿದೆ.