ವಾಷಿಂಗ್ಟನ್, ಎ.28 (Daijiworld News/MB) : ಚೀನಾವು ಕೊರೊನಾ ಹರಡುವುದನ್ನು ಮೊದಲೇ ತಡೆಯಬಹುದಿತ್ತು, ಈ ಬಗ್ಗೆ ಗಂಭೀರ ತನೆಖೆಗಳನ್ನು ನಡೆಸುತ್ತಿದ್ದೇವೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕುರಿತಾಗಿ ಶ್ವೇತಭವನದಲ್ಲಿ ಪತ್ರಿಕಾ ಹೇಳಿಕೆ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಅವರು, ಕೊರೊನಾ ಪತ್ತೆಯಾದ ಆರಂಭದಲ್ಲೇ ಸೋಂಕು ಹರಡುವುದನ್ನು ತಡೆಯಬಹುದಿತ್ತು. ಅದರಿಂದಾಗಿ ವಿಶ್ವದಾದ್ಯಂತ ಕೊರೊನಾ ಹರಡುವುದನ್ನು ನಾವು ತಡೆಯಬಹುದಿತ್ತು. ಆದರೆ ಚೀನಾ ಆ ಕೆಲಸ ಮಾಡಿಲ್ಲ. ಆ ನಿಟ್ಟಿನಲ್ಲಿ ಚೀನಾ ವಿರುದ್ಧ ಗಂಭೀರವಾಗಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಚೀನಾವನ್ನು ನಮಗೆ ಹೊಣೆಗಾರರನ್ನಾಗಿ ಮಾಡಬಹುದು. ಅದು ಹೇಗೆ ಎಂದು ನಮಗೂ ತಿಳಿದಿದೆ. ಆ ವಿಷಯ ಅವರಿಗೂ ತಿಳಿದಿದೆ ಎಂದು ಹೇಳಿದರು.
ಇನ್ನು ಜರ್ಮನಿಯ ಪತ್ರಿಕೆಯೊಂದು ಕೊರೊನಾದ ಆರ್ಥಿಕ ನಷ್ಟವನ್ನು ಉಲ್ಲೇಖ ಮಾಡಿ ಚೀನಾಕ್ಕೆ ಶುಲ್ಕ ವಿಧಿಸಿ ಸಂಪಾದಕೀಯ ಪ್ರಕಟಿಸಿದ್ದು ಈ ಕುರಿತಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಅದಕ್ಕಿಂತಲೂ ಸುಲಭವಾದದ್ದನ್ನು ನಾವು ಮಾಡುತ್ತೇವೆ. ಇದು ಜಾಗತಿಕವಾಗಿ ಆಗಿರುವ ನಷ್ಟ. ನಾವು ಜರ್ಮನಿ ಉಲ್ಲೇಖ ಮಾಡಿರುವ ಹಣಕ್ಕಿಂತ ಹೆಚ್ಚಿನ ಹಣದ ಕುರಿತಾಗಿಯೇ ಮಾತನಾಡಲಿದ್ದೇವೆ. ಆ ಹಣದ ಬಗ್ಗೆ ಇನ್ನೂ ತೀರ್ಮಾನ ಕೈಗೊಂಡಿಲ್ಲ ಎಂದಿದ್ದಾರೆ.
ಅಮೆರಿಕಾದಲ್ಲಿ ಕೊರೊನಾದಿಂದ 55,000ಕ್ಕೂ ಅಧಿಕ ಜನರು ಮೃತಪಟ್ಟಿದ್ದು ಲಾಕ್ಡೌನ್ ಪರಿಣಾಮದಿಂದಾಗಿ ಆರ್ಥಿಕವಾಗಿ ಬಹಳ ನಷ್ಟವಾಗಿದೆ.