ವಾಷಿಂಗ್ಟನ್, ಮೇ 02 (Daijiworld News/MB) : ಕೊರೊನಾ ನಿಯಂತ್ರಣಕ್ಕಾಗಿ ಹಲವು ದೇಶಗಳಲ್ಲಿ ಜಾರಿ ಮಾಡಲಾಗಿರುವ ಲಾಕ್ಡೌನ್ನ್ನು ಬಹಳ ಎಚ್ಚರಿಕೆಯಿಂದ ತೆರವುಗೊಳಿಸಬೇಕಾಗುತ್ತದೆ. ಲಾಕ್ಡೌನ್ ನಿರ್ಬಂಧ ಸಡಿಲಿಕೆಯಾದಲ್ಲಿ ಸೋಂಕು ಮತ್ತೆ ಹಬ್ಬುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ತಜ್ಞರಾದ ಡಾ.ಮೈಕ್ ರಯಾನ್, ಹಲವು ದೇಶಗಳು ಲಾಕ್ಡೌನ್ ನಿರ್ಬಂಧಗಳನ್ನು ಸಡಿಲಿಕೆ ಮಾಡಿದ್ದವು. ಆ ಪೈಕಿ ಹಲವು ಆಫ್ರಿಕ ಮತ್ತು ಮಧ್ಯ ಏಷ್ಯಾದ ದೇಶದಲ್ಲಿ ಸಮಸ್ಯೆ ಉಂಟಾಗಿದೆ. ಲಾಕ್ಡೌನ್ ಸಡಿಲಿಕೆ ಪರಿಣಾಮ ಸೂಡಾನ್, ದಕ್ಷಿಣ ಸೂಡಾನ್, ಸಿರಿಯಾ, ಯೆಮೆನ್, ಅಫ್ಘಾನಿಸ್ತಾನ, ಸಿಯೆರ್ರಾ ಲಿಯೋನ್, ಸೆಂಟ್ರಲ್ ಆಫ್ರಿಕಾ ರಿಪಬ್ಲಿಕ್ ಸ್ಥಿತಿ ಬಹಳ ಗಂಭೀರವಾಗಿದೆ. ಹಾಗಾಗಿ ಲಾಕ್ಡೌನ್ ತೆರವು ಮಾಡುವ ಸಂದರ್ಭದಲ್ಲಿ ಪ್ರಮಖವಾಗಿ ಸೋಂಕು ಪ್ರಕರಣಗಳು ಹೆಚ್ಚಾಗದಂತೆ ಕ್ರಮಕೈಗೊಳ್ಳಬೇಕು. ಅದರಲ್ಲೂ ಮುಖ್ಯವಾಗಿ ವೈರಸ್ ಸಮುದಾಯದ ಹಂತಕ್ಕೆ ತಲುಪದಂತೆ ನೋಡಿಕೊಳ್ಳುವುದು ದೇಶದ ಹೊಣೆಗಾರಿಕೆ ಎಂದು ತಿಳಿಸಿದ್ದಾರೆ.
ಲಾಕ್ಡೌನ್ ನಿರ್ಬಂಧ ಸಡಿಲಿಕೆ ಮಾಡಿದರೂ ಕೂಡಾ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕು. ಸೋಂಕು ಹೆಚ್ಚಾಗುತ್ತಿರುವ ಕಾರಣದಿಂದಾಗಿ ಶಂಕಿತ ಪ್ರಕರಣಗಳ ಪರೀಕ್ಷೆಯನ್ನು ಮುಂದುವರಿಸುವ ಅನಿವಾರ್ಯತೆಯಿದೆ ಎಂದು ಹೇಳಿದ್ದಾರೆ.
ಹಾಗೆಯೇ ಈ ವೈರಸ್ ಹರಡುವಿಕೆ ಕುರಿತಾಗಿ ಅಧ್ಯಯನ ನಡೆಸಲಾಗುತ್ತಿದೆ. ಇದೊಂದು ನೈಸರ್ಗಿಕವಾದ ವೈರಸ್, ಈ ಬಗ್ಗೆ ಸಂಶೋಧನೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.