ಲಂಡನ್, ಮೇ 03 (Daijiworld News/MB) : ನಾನು ಕೊರೊನಾ ವೈರಸ್ ಸೋಂಕಿನಿಂದಾಗಿ ಸಾವನ್ನಪ್ಪಿದ್ದೇನೆ ಎಂದು ಘೋಷಣೆ ಮಾಡಲು ವೈದ್ಯರು ತಯಾರಾಗಿದ್ದರು ಎಂದು ಕೊರೊನಾ ವೈರಸ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿರುವ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಭಾನುವಾರ ಬ್ರಿಟನ್ನ ‘ದಿ ಸನ್’ ಪತ್ರಿಕೆಯ ಸಂದರ್ಶನದಲ್ಲಿ ಮಾತನಾಡಿದ ಅವರು, ಕೊರೊನಾವನ್ನು ಎದುರಿಸುವುದು ಬಹಳ ಕಠಿಣವಾದಂತ ಸನ್ನಿವೇಶ. ಸೋಂಕಿಗೆ ಚಿಕಿತ್ಸೆ ನೀಡಲು ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆ ಎಂದು ತಿಳಿದ ವೈದ್ಯರು ಇನ್ನೇನು ಸಾವಿನ ಸುದ್ದಿ ಘೋಷಣೆ ಮಾಡಬೇಕಾದೀತು ಎಂದುಕೊಂಡಿದ್ದರು. ವೈದ್ಯರು ಸ್ಟಾಲಿನ್ ಮಾದರಿಯ ಸಾವಿನ ಸನ್ನಿವೇಶನವನ್ನು ಎದುರಿಸಲು ತಯಾರಿ ಮಾಡಿಕೊಂಡಿದ್ದರು. ನನ್ನ ಸ್ಥಿತಿ ಉತ್ತಮವಾಗಿರಲಿಲ್ಲ. ಸಾವಿನ ಘೋಷಣೆ ಮಾಡಲು ತಯಾರಿ ನಡೆಯುತ್ತಿದೆ ಎಂದು ನನಗೆ ತಿಳಿದಿತ್ತು ಎಂದಿದ್ದಾರೆ.
ಪರಿಸ್ಥಿತಿ ಸ್ವಲ್ಪ ಕಷ್ಟವಾಗಿದೆ ಎಂದು ತಿಳಿದಾಗ ವೈದ್ಯರು ನನ್ನನ್ನು ಐಸಿಯುಗೆ ಸ್ಥಳಾಂತರಿಸಿ, ಆಕ್ಸಿಜನ್ ವ್ಯವಸ್ಥೆಯಲ್ಲಿಡಬೇಕೆ ಬೇಡವೇ ಎಂದು ಸಮಾಲೋಚನೆ ನಡೆಸಿದ್ದರು. ಆ ಸಂದರ್ಭದಲ್ಲೇ ನನಗೆ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ವೈದ್ಯರು ಎಲ್ಲಾ ಚಿಕಿತ್ಸೆಗೆ ಚರ್ಚೆ ನಡೆಸಿದ್ದರು. ಮೊದಲು ನಾನು ಆಸ್ಪತ್ರೆಗೆ ಹೋಗಲು ಒಪ್ಪಿಲ್ಲ, ಬಳಿಕ ನನ್ನಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿ ವೈದ್ಯರು ಆಸ್ಪತ್ರೆಗೆ ದಾಖಲಾಗಲೇಬೇಕು ಎಂದು ಒತ್ತಾಯ ಮಾಡಿದರು. ಅಂದು ಅವರು ಕೈಗೊಂಡ ನಿರ್ಧಾರ ಸರಿಯಾಗಿತ್ತು. ಅದು ನನಗೆ ಈಗ ಅರ್ಥವಾಗುತ್ತಿದೆ ಎಂದು ಭಾವುಕರಾಗಿ ಹೇಳಿದ್ದಾರೆ.
55ರ ಹರೆಯದ ಜಾನ್ಸನ್ ಅವರಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಮಾರ್ಚ್ 27 ರಂದು ಮೊದಲು ಘೋಷಣೆ ಮಾಡಲಾಗಿದ್ದು ಅವರಿಗೆ ಹೆಚ್ಚಿನ ತೊಂದರೆ ಇಲ್ಲ ಎಂದು ಹೇಳಲಾಗಿತ್ತು. ಆದರೆ ಒಂದು ವಾರ ಪ್ರತ್ಯೇಕವಾಗಿದ್ದ ಅವರಿಗೆ ಅನಾರೋಗ್ಯ ಹೆಚ್ಚಾದ ಕಾರಣ ಏ. 5ರಂದು ಆಸ್ಪತ್ರೆಗೆ ದಾಖಲಿಸಲಾಗಿದ್ದು ಒಂದೇ ದಿನದಲ್ಲಿ ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಯಿತು. ಹೀಗೆ ಮೂರು ದಿನಗಳ ಕಾಲ ಆಕ್ಸಿಜನ್ ವ್ಯವಸ್ಥೆಯಲ್ಲಿದ್ದ ಅವರು ಏ. 12ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.
ಕಳೆದ ಸೋಮವಾರವಷ್ಟೇ ಜಾನ್ಸನ್ ಕೆಲಸಕ್ಕೆ ಹಾಜರಾಗಿದ್ದು ಏತನ್ಮಧ್ಯೆ ಅವರ ಗೆಳತಿ ಕ್ಯಾರಿ ಸೈಮಂಡ್ಸ್ ಅವರು ಬುಧವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.