ವಾಷಿಂಗ್ಟನ್, ಮೇ 04 (DaijiworldNews/PY) : ಈ ವರ್ಷದ ಕೊನೆಯಲ್ಲಿ ಕೊರೊನಾ ನಿರ್ಮೂಲನಾ ಲಸಿಕೆಯನ್ನು ಪಡೆಯಲಿದ್ದೇವೆ. ನಮಗೆ ಇದರಲ್ಲಿ ತುಂಬಾ ವಿಶ್ವಾಸವಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಅಮೆರಿಕದಲ್ಲಿ ಈ ವರ್ಷದ ಕೊನೆಯಲ್ಲಿ ಕೊರೊನಾ ನಿರ್ಮೂಲನಾ ಲಸಿಕೆ ಸಿದ್ದವಾಗುತ್ತದೆ ಎಂದು ತಿಳಿಸಿದರು.
ಈಗಾಗಲೇ ಅಮೆರಿಕ ಸಂಶೋಧಕರು ಲಸಿಕೆ ಕಂಡುಹಿಡಿಯುವ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ಔಷಧವನ್ನು ಬೇರೆ ದೇಶದ ಸಂಶೋಧಕರು ಕಂಡುಹಿಡಿದರೆ ನಮಗೂ ಸಂತೋಷ. ನನ್ನ ಟೋಪಿ ತೆಗೆದು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ಈ ಸಂದರ್ಭದಲ್ಲಿ ಲಸಿಕೆ ಕಂಡುಹಿಡಿಯುವುದೊಂದೇ ನಮ್ಮ ಗುರಿಯಾಗಿದೆ ಎಂದರು.
ಶಾಲೆಗಳು ಹಾಗೂ ವಿಶ್ವವಿದ್ಯಾಲಯಗಳನ್ನು ಸೆಪ್ಟೆಂಬರ್ನಲ್ಲಿ ಪುನಃ ತೆರೆಯಲು ಪ್ರಯತ್ನಿಸಲಾಗುವುದು. ಶಾಲಾ-ಕಾಲೇಜಿಗೆ ವಿದ್ಯಾರ್ಥಿಗಳು ಹಿಂದಿರುಗಬೇಕು ಎನ್ನುವುದು ನನ್ನ ಬಯಕೆ ಎಂದು ಹೇಳಿದರು.
ಈಗಾಗಲೇ ಅಮೆರಿಕದಲ್ಲಿ ಕೊರೊನಾ ಸೋಂಕಿಗೆ ಸುಮಾರು 68 ಸಾವಿರಕ್ಕಿಂತ ಅಧಿಕ ಮಂದಿ ಸಾವನ್ನಪ್ಪಿದ್ದು, ಸೋಂಕಿನಿಂದ ಸುಮಾರು 11 ಲಕ್ಷಕ್ಕಿಂತಲೂ ಅಧಿಕ ಮಂದಿ ಬಳಲುತ್ತಿದ್ದಾರೆ.