ಟಾಂಜಾನಿಯಾ, ಮೇ 05 (DaijiworldNews/PY) : ಕೊರೊನಾ ಟೆಸ್ಟ್ ಕಿಟ್ಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗಿತ್ತು. ಆದರೆ ಅವು ತಾಂತ್ರಿಕ ಸಮಸ್ಯೆ ಹೊಂದಿವೆ. ಕುರಿ, ಮೇಕೆಗಳಿಗೂ ಕೊರೊನಾ ಪಾಸಿಟಿವ್ ಎಂದೇ ವರದಿ ತೋರಿಸುತ್ತಿವೆ ಎಂದು ಟಾಂಜಾನಿಯಾ ಅಧ್ಯಕ್ಷ ಜಾನ್ ಮಾಗುಫುಲಿ ಹೇಳಿದ್ದಾರೆ.
ಟಾಂಜಾನಿಯಾದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯನ್ನು ಬಹಿರಂಗಪಡಿಸದಂತೆ ಆದೇಶ ಹೊರಡಿಸಿ ಟೀಕೆಗೆ ಒಳಗಾಗಿದ್ದ ಟಾಂಜಾನಿಯಾ ಅಧ್ಯಕ್ಷ ಜಾನ್ ಮಾಗುಫುಲಿ ಅವರು ಇದೀಗ ಮತ್ತೊಂದು ವಿಷಯವನ್ನು ಹೇಳುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.
ವಾಯವ್ಯ ಟಾಂಜಾನಿಯಾದ ಚಾಟೋ ಎಂಬಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ವಿದೇಶದಿಂದ ಕೊರೊನಾ ಟೆಸ್ಟ್ ಕಿಟ್ಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಆದರೆ, ಅವು ತಾಂತ್ರಿಕ ಸಮಸ್ಯೆ ಹೊಂದಿದ್ದು, ಕುರಿ, ಮೇಕೆಗಳಿಗೂ ಕೊರೊನಾ ಪಾಸಿಟಿವ್ ಎಂದೇ ವರದಿ ತೋರಿಸುತ್ತಿವೆ ಎಂದು ಹೇಳಿದ್ದಾರೆ.
ಇದನ್ನು ನಾವು ನೋಡಿದ್ದೇವೆ. ಹಾಗಾಗಿ ಕುರಿ, ಮೇಕೆಗಳ ಮಾದರಿಯನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳಿಸಲಾಗಿತ್ತು. ಅಲ್ಲದೇ ಪಪ್ಪಾಯಿ ಹಣ್ಣಿನ ರಸವನ್ನೂ ತಪಾಸಣೆಗೆ ರವಾನಿಸಲಾಗಿತ್ತು. ಆದರೆ, ಅದರ ಮೇಲೆ ಮನುಷ್ಯರ ಹೆಸರು ಹಾಗೂ ವಯಸ್ಸನ್ನು ನಮೂದಿಸಲಾಗಿತ್ತು. ಕಿಟ್ ಪರೀಕ್ಷೆ ಮಾಡುವ ನಿಟ್ಟಿನಲ್ಲಿ ಹೀಗೆ ಮಾಡಿದ್ದೆವು ಎಂದಿದ್ದಾರೆ.
ಇದನ್ನು ಲ್ಯಾಬೋರೇಟರಿಯಲ್ಲಿ ಪರೀಕ್ಷೆ ಮಾಡುವವರಿಗೆ ಇದು ಕುರಿ, ಮೇಕೆ, ಪಪ್ಪಾಯಿಯದ್ದು, ಮನುಷ್ಯರದ್ದಲ್ಲ ಎಂದು ತಿಳಿದಿರಲಿಲ್ಲ. ಆ ಮಾದರಿಗಳನ್ನು ಅವರು ವಿದೇಶದಿಂದ ಬಂದ ಟೆಸ್ಟಿಂಗ್ ಕಿಟ್ಗಳ ಮೂಲಕ ತಪಾಸಣೆ ನಡೆಸಿ ವರದಿ ನೀಡಿದ್ದಾರೆ. ಎಲ್ಲಾ ಕೊರೊನಾ ಪಾಸಿಟಿವ್ ಎಂದು ವರದಿ ಬಂದಿವೆ. ನಮಗೆ ಇದು ಸೋಜಿಗವನ್ನುಂಟು ಮಾಡಿದೆ ಎಂದು ತಿಳಿಸಿದ್ದಾರೆ.
ಕೊರೊನಾ ವೈರಸ್ ಕುರಿ, ಮೇಕೆಗಳಿಗೇನೂ ತಗುಲಲಿಲ್ಲ. ಪಪ್ಪಾಯಿ ಹಣ್ಣಿಗೆ ಹೇಗೆ ಸೋಂಕು ಬರುತ್ತದೆ. ಆದರೂ ಪಪ್ಪಾಯಿ ಹಣ್ಣಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದರೆ ಇದರಲ್ಲೇನೋ ತಪ್ಪಿದೆ ಎಂದರ್ಥ. ಇದರ ಬಗ್ಗೆ ತನಿಖೆ ನಡೆಯಬೇಕು ಎಂದು ಅವರು ಆದೇಶ ನೀಡಿದ್ದಾರೆ. ಅಲ್ಲದೇ ನಮ್ಮ ದೇಶದ ಸೈನಿಕರೂ ಎಚ್ಚರಿಕೆಯಿಂದ ಇರಬೇಕು. ಆಮದು ಆಗುವ ಇಂತಹ ಕಿಟ್ಗಳನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.
ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಆಫ್ರಿಕನ್ ದೇಶದಲ್ಲಿ ಕೊರೊನಾ ಪ್ರಕರಣ ಕಡಿಮೆ ಇದೆ. ಭಾನುವಾರದವರೆಗೆ ಟಾಂಜಾನಿಯಾದಲ್ಲಿ 480 ಕರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ಅದಾದಾ ಬಳಿಕ ಅಧ್ಯಕ್ಷ ಜಾನ್ ಮಾಗುಫುಲಿ ಅವರು ಹೆಲ್ತ್ ಬುಲೆಟಿನ್ ನೀಡುವುದನ್ನು ನಿಷೇಧ ಮಾಡಿದ್ದಾರೆ.