ಫಿಯೊನಿಕ್ಸ್ , ಮೇ 06 (Daijiworld News/MB) : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಸ್ಕ್, ಗ್ಲೌಸ್ ಇತ್ಯಾದಿ ವೈಯಕ್ತಿಕ ಸುರಕ್ಷತೆ ಸಾಧನ(ಪಿಪಿಇ) ತಯಾರಿಕೆ ಮಾಡುವ ಕಾರ್ಖಾನೆಯಲ್ಲೇ ಮಾಸ್ಕ್ ಧರಿಸಲು ನಿರಾಕರಿಸಿದ ಘಟನೆ ನಡೆದಿದೆ.
ಅವರು ಅರಿಜೊನಾ ಫೆಡರಲ್ ರಾಜ್ಯದ ಫಿಯೊನಿಕ್ಸ್ ನಲ್ಲಿರುವ ಹನಿವೆಲ್ಲ್ ಫ್ಯಾಕ್ಟರಿಗೆ ಭೇಟಿ ನೀಡಿ ಮಾಸ್ಕ್ ತಯಾರಿಕೆಯನ್ನು ಪರಿಶೀಲಿಸಿದರು. ಕೊರೊನಾ ವೈರಸ್ ದೇಶದಲ್ಲಿ ಕಾಣಿಸಿಕೊಂಡು ವ್ಯಾಪಕವಾಗಿ ಹರಡಿದ ಬಳಿಕ ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್ ಬಿಟ್ಟು ಬೇರೆ ಕಡೆ ಕೈಗೊಂಡ ಬಹುದೊಡ್ಡ ಪ್ರವಾಸ ಇದಾಗಿದೆ.
ಟ್ರಂಪ್ ಪರಿಶೀಲನೆಗಾಗಿ ಭೇಟಿ ನೀಡಿದ ಕಂಪೆನಿಯಲ್ಲಿ ಎಲ್ಲಾ ಕಡೆಗಳಲ್ಲಿ ಮಾಸ್ಕ್ ಧರಿಸಿ ಎಂದು ಬರೆಯಲಾಗಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟ ನಡೆಸುವ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಇತರರಿಗೆ ಮಾಸ್ಕ್ ಪೂರೈಸುವುದಕ್ಕೆ ಈ ಕಂಪೆನಿ ಸಿಬ್ಬಂದಿಗಳನ್ನು ಹೊಗಳಿದ ಅಮೆರಿಕಾ ಅಧ್ಯಕ್ಷ, ಅಲ್ಲಿನ ಸಿಬ್ಬಂದಿಗಳು ಮಾಸ್ಕ್ ಧರಿಸುವಂತೆ ಸೂಚನೆ ನೀಡಿದಾಗ ಅದನ್ನು ನಿರಾಕರಿಸಿದ್ದಾರೆ. ಈ ಸಂದರ್ಭದಲ್ಲಿ ಅವರೊಂದಿಗೆ ಇದ್ದ ಇತರ ಅಧಿಕಾರಿಗಳು ಕೂಡಾ ಮಾಸ್ಕ್ ಧರಿಸಿಲ್ಲ.
ಈ ಸಂದರ್ಭದಲ್ಲಿ ವರದಿಗಾರರೊಂದಿಗೆ ಮಾತನಾಡಿ, ಕೊರೊನಾ ಇದೆ ಎಂಬ ಕಾರಣಕ್ಕಾಗಿ ಜನರನ್ನು ಅವರ ಮನೆಯಲ್ಲಿ ಎಷ್ಟು ದಿನವೆಂದು ಬಂಧಿಸಲಾಗುವುದು. ಒಂದಲ್ಲ ಒಂದು ದಿನ ದೇಶದಲ್ಲಿ ನಿತ್ಯದ ಚಟುವಟಿಕೆಯಲ್ಲಿ ತೊಡಗಲೇಬೇಕು. ಅಮೆರಿಕದಲ್ಲಿ ಅಧಿಕ ಜನರು ಸಾವನ್ನಪ್ಪಿದ್ದು ದೇಶದ ಆರ್ಥಿಕತೆ ಮೇಲೆ ಹೊಡೆತ ಬಿದ್ದಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಅಂತರ ಕ್ರಮಗಳನ್ನು ಮತ್ತು ಆರ್ಥಿಕ ಪುನಶ್ಚೇತನಕ್ಕೆ ನಿರ್ಬಂಧಗಳನ್ನು ತೆಗೆದುಹಾಕುವುದರಿಂದ ಅಧಿಕ ಸಾವು ಸಂಭವಿಸ ಬಹುದಲ್ಲವೇ ಎಂದು ವರದಿಗಾರರು ಪ್ರಶ್ನಿಸಿದ್ದು ಅದು ಸಾಧ್ಯತೆಯಿದೆ ಎಂದು ಹೇಳಿದರು.
ಇನ್ನು ಟ್ರಂಪ್ ಮಾಸ್ಕ್ ಧರಿಸದ ವಿಚಾರಕ್ಕೆ ಸಂಬಂಧಿಸಿ ಟ್ರಂಪ್ ಅವರು ಎಲ್ಲರಲ್ಲೂ ಮಾಸ್ಕ್ ಧರಿಸಿ ಎಂದು ಹೇಳುತ್ತಾರೆ. ಅವರ ಪತ್ನಿ ಮೆನಾಲಿಯಾ ಟ್ರಂಪ್ ಕೂಡ ಜನರಿಗೆ ಮಾಸ್ಕ್ ಧರಿಸಿ ಎಂದು ಕರೆಕೊಡುತ್ತಾರೆ. ಆದರೆ ಅಧ್ಯಕ್ಷರಾಗಿರುವ ಟ್ರಂಪ್ ಮಾತ್ರ ಮಾಸ್ಕ್ ಧರಿಸಿದ್ದು ಕಂಡಿದ್ದೇ ಇಲ್ಲ ಎಂದು ವಿರೋಧ ಪಕ್ಷದವರು ಟೀಕೆ ಮಾಡಿದ್ದಾರೆ.