ರಿಯಾದ್, ಮೇ 07 (Daijiworld News/MB) : ಸೌದಿ ಅರೇಬಿಯಾದಲ್ಲಿ ಕೊರೊನಾ ಲಾಕ್ಡೌನ್ ನಿಯಮ ಉಲ್ಲಂಘನೆ ಮಾಡಿದವರಿಗೆ ನೀಡಲಾಗುವ ಶಿಕ್ಷೆ ಹಾಗೂ ದಂಡ ಪ್ರಮಾಣ ಕೇಳಿದರೆ ನೀವು ಬೆಚ್ಚಿ ಬೀಳುವುದಂತೂ ಖಚಿತ.
ನಾಗರಿಕರ ಆರೋಗ್ಯದ ಹಿತದೃಷ್ಟಿಯಿಂದ ಸೌದಿ ಅರೇಬಿಯಾದ ಅಂತರಿಕ ಸಚಿವಾಲಯ ಕೊರೊನಾ ಲಾಕ್ಡೌನ್ ಉಲ್ಲಂಘನೆ ಮಾಡಿದವರಿಗೆ ಭಾರೀ ಪ್ರಮಾಣದ ದಂಡ ಹಾಗೂ ಜೈಲಿಗೆ ಕಳುಹಿಸುವುದಾಗಿಯೂ ತಿಳಿಸಿದೆ. ಅದರಲ್ಲೂ ದೇಶದಲ್ಲಿ ಇರುವ ವಿದೇಶಿಯರು ಯಾವುದೇ ನಿಯಮವನ್ನು ಉಲ್ಲಂಘನೆ ಮಾಡಿದರೆ ಗಡಿಪಾರು ಮಾಡಿ, ಮರು ಪ್ರವೇಶ ನಿರ್ಬಂಧ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಈ ಹೊಸ ನಿಯಮಾವಳಿ ಪ್ರಕಾರ ಕೊರೊನಾ ವೈರಸ್ ನೀತಿಗಳನ್ನು ಉಲ್ಲಂಘಿಸುವ ಖಾಸಗಿ ಕಂಪನಿಗಳು ಹಾಗೂ ಅದರ ನೌಕರರು 1000 ಸೌದಿ ರಿಯಾಲ್ (ಎಸ್ಆರ್) ಒಂದು ಲಕ್ಷ ರಿಯಾಲ್ ವರೆಗೆ ದಂಡ ಪಾವತಿಸಬೇಕು. ಇನ್ನು ಕ್ವಾರಂಟೈನ್ ನಿಯಮ ಉಲ್ಲಂಘನೆ ಮಾಡಿದರೆ ದಂಡ ಮಾತ್ರವಲ್ಲದೇ ಜೈಲು ಶೀಕ್ಷೆಯನ್ನೂ ನೀಡಲಾಗುತ್ತದೆ.
ಅದರಲ್ಲೂ ಮುಖ್ಯವಾಗಿ ಯಾರಾದರೂ ಉದ್ದೇಶಪೂರ್ವಕವಾಗಿ ಮತ್ತೊಬ್ಬರಿಗೆ ರೋಗ ಹರಡಿದರೆ ಅವರಿಗೆ ಐದು ವರ್ಷ ಜೈಲು ಮತ್ತು ಐದು ಲಕ್ಷ ರಿಯಾಲ್ಸ್ ದಂಡ ವಿಧಿಸಲಾಗುತ್ತದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ಕೊರೊನಾ ಕುರಿತಾಗಿ ಸುಳ್ಳು ಸುದ್ದಿ ಹರಡಿದರೆ ಒಂದು ಲಕ್ಷ ರಿಯಾಲ್ನಿಂದ 10 ಲಕ್ಷ ರಿಯಾಲ್ಸ್ ವರೆಗೆ ದಂಡ ಮತ್ತು ಜೈಲು ಶಿಕ್ಷೆ ನೀಡುವುದಾಗಿಯೂ ತಿಳಿಸಲಾಗಿದೆ.