ದುಬೈ, ಮೇ 07 (DaijiworldNews/SM): ಮಾಕರ ಕೊರೊನಾ ಸೋಂಕಿತೆಯಾಗಿದ್ದ ಭಾರತೀಯ ಮೂಲದ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ನಡೆದಿದ್ದು, ಮಗು ಆರೋಗ್ಯವಂತವಾಗಿದೆ ಎಂದು ತಿಳಿದುಬಂದಿದೆ.
ಭಾರತೀಯ ಮೂಲದ ಸುಮಾರು 25 ವರ್ಷದ ಮಹಿಳೆಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತ್ತು. ಅವರಿಗೆ ದುಬೈನ ಅಲ್ ಝುಹ್ರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತುಂಬು ಗರ್ಭಿಣಿಯಾಗಿದ್ದ ಅವರು, ಇದೀಗ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ತಿಂಗಳ ಮೂರನೇ ವಾರದಲ್ಲಿ ಹೆರಿಗೆಯಾಗಬಹುದೆಂದು ವೈದ್ಯರು ಅಂದಾಜಿಸಿದ್ದರು. ಆದರೆ, ಅದಕ್ಕೂ ಮುನ್ನ ಹೆರಿಗೆಯಾಗಿದ್ದು, ಮಗು ಆರೋಗ್ಯವಂತವಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಸದ್ಯ ತಾಯಿ ಮಗುವನ್ನು ಒಂದೇ ಕೊಠಡಿಯಲ್ಲಿರಿಸಲಾಗಿದೆ. ಮಗುವಿಗೆ ಎದೆಹಾಲು ಉಣಿಸುವುದರಿಂದ ಸೋಂಕು ಹರಡುವುದಿಲ್ಲ ಎಂದು ಅಮೇರಿಕಾದ ಸಂಶೋಧನಾ ಸಂಸ್ಥೆಯೊಂದು ಹೇಳಿದೆ. ತಾಯಿ ಹಾಗೂ ಮಗುವಿನ ಮೇಲೆ ನಿಗಾ ಇರಿಸಲಾಗಿದೆ.