ವಾಷಿಂಗ್ಟನ್, ಮೇ 10 (Daijiworld News/MB) : ಕೊರೊನಾ ವೈರಸ್ ಸೋಂಕಿನ ಸಂಕಷ್ಟದ ನಿರ್ವಹಣೆಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರಿಯಾಗಿ ಮಾಡುತ್ತಿಲ್ಲ ಎಂದು ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಆರೋಪಿಸಿದ್ದಾರೆ.
ಈ ಕುರಿತು ಅವರು ತಮ್ಮ ಆಡಳಿತವಾಧಿಯಲ್ಲಿ ಸಹವರ್ತಿಗಳಾಗಿದ್ದವರೊಂದಿಗೆ ಕಾನ್ಫರೆನ್ಸ್ ಕಾಲ್ನಲ್ಲಿ ಮಾತನಾಡಿದ ಆಡಿಯೋ ಸೋರಿಕೆಯಾಗಿದ್ದು ಅದರಲ್ಲಿ ಅವರು ಮುಂಬರುವ ಚುನಾವಣೆಯಲ್ಲಿ ಟ್ರಂಪ್ ವಿರುದ್ಧ ನಿಲ್ಲುವ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಅವರನ್ನು ಬೆಂಬಲಿಸುವಂತೆ ಹೇಳಿದ್ದಾರೆ. ಹಾಗೆಯೇ, ವಿಶ್ವದ ಅತ್ಯುತ್ತಮ ಆಡಳಿತ ವ್ಯವಸ್ಥೆ ಹೊಂದಿರುವ ಸರ್ಕಾರಗಳೂ ಕೂಡಾ ಕೊರೊನಾದಿಂದಾಗಿ ಅಸ್ತವ್ಯಸ್ತವಾಗಿದೆ. ಆದರೆ ನಮ್ಮಲ್ಲಿ ಬಹಳ ವಿಪರೀತವಾದ ಮಟ್ಟಕ್ಕೆ ತಲುಪಿದೆ. ಇದರಲ್ಲಿ ನನಗೇನು ಲಾಭವಿದೆ? ಬೇರೆಯವರಿಗೆ ಏನೇ ಆದರೂ ನನಗೇನು? ಎಂಬಂತಹ ಮನಸ್ಥಿತಿ ಇರುವವರ ಕೈಯಲಿದೆ ಆಡಳಿತದ ಚುಕ್ಕಾಣಿ. ಹೀಗಿರುವಾಗ ಇನ್ನು ಬೇರೆ ಏನಾಗಲು ಸಾಧ್ಯ ಎಂದು ಟ್ರಂಪ್ ವಿರುದ್ಧವಾಗಿ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ.
ಈ ಬಾರಿ ನಡೆಯುವ ಅಧ್ಯಕ್ಷೀಯ ಚುನಾವಣೆಯು ಅತಿಮುಖ್ಯವಾಗಿದೆ. ಯಾಕೆಂದರೆ ಈ ಬಾರಿ ನಾವು ಓರ್ವ ವ್ಯಕ್ತಿ, ಪಕ್ಷವನ್ನು ಎದುರಿಸುತ್ತಿಲ್ಲ. ಬದಲಾಗಿ ಹಲವು ವರ್ಷಗಳಿಂದ ಇರುವ ಸ್ವಾರ್ಥಪರ, ವಿವೇಚನೆಯಿಲ್ಲದ ಆಡಳಿತ, ಒಡೆದು ಆಳುವ ನೀತಿ, ಇನ್ನೊಬ್ಬರನ್ನು ಶತ್ರುಗಳು ಎಂದು ಪರಿಗಣಿಸುವ ಧೋರಣೆಯ ವಿರುದ್ಧವಾಗಿ ನಮ್ಮ ಹೋರಾಟ. ಇದರಿಂದಾಗಿ ಅಮೆರಿಕಾ ಈಗಾಗಲೇ ಸಾಕಷ್ಟು ಸಮಸ್ಯೆ ಎದುರಿಸಿದೆ ಎಂದು ಹೇಳಿದ್ದಾರೆ.
ಈ ಮೊದಲು ಟ್ರಂಪ್, ಈ ಹಿಂದೆ ಆಡಳಿತ ನಡೆಸಿದವರು ಆರೋಗ್ಯ ವ್ಯವಸ್ಥೆಯನ್ನು ಸರಿಪಡಿಸಲು ಹೆಚ್ಚು ಗಮನ ನೀಡಿಲ್ಲ, ಆ ಕಾರಣದಿಂದಾಗಿ ಕೊರೊನಾ ಸೋಂಕಿನ ವಿರುದ್ಧದ ಹೋರಾಟಕ್ಕೆ ಹಿನ್ನಡೆಯುಂಟಾಗಿದೆ ಎಂದು ಪರೋಕ್ಷವಾಗಿ ಒಬಾಮಾ ನೇತೃತ್ವದ ಡೆಮಾಕ್ರಟಿಕ್ ಪಕ್ಷದ ಆಡಳಿತವನ್ನು ಟೀಕಿಸಿದ್ದರು.
ಅಮೆರಿಕದಲ್ಲಿ ಅಧ್ಯಕ್ಷರ ಚುನಾವಣೆಗೆ ಇನ್ನು 6 ತಿಂಗಳು ಬಾಕಿಯಿದೆ. ಟ್ರಂಪ್ ಮತ್ತು ಬಿಡೆನ್ ನಡುವೆ ಜಿದ್ದಾಜಿದ್ದಿ ನಡೆಯುವ ನಿರೀಕ್ಷೆಗಳಿವೆ.
ಈವರೆಗೆ ಕೊರೊನಾಗೆ ಅಮೆರಿಕದಲ್ಲಿ ಸುಮಾರು 75 ಸಾವಿರ ಮಂದಿ ಬಲಿಯಾಗಿದ್ದಾರೆ.