ವಿಶ್ವಸಂಸ್ಥೆ, ಮೇ 11 (DaijiworldNews/PY) : ಮಹಾಮಾರಿ ಕೊರೊನಾದಿಂದಾಗಿ ಅಂತರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಶೇ 60ರಿಂದ 80ರಷ್ಟು ಕುಸಿತವಾಗಲಿದ್ದು, ಇದರಿಂದಾಗಿ 910 ಬಿಲಿಯನ್ ಡಾಲರ್ನಿಂದ (₹69 ಲಕ್ಷ ಕೋಟಿ)1.2 ಟ್ರಿಲಿಯನ್ ಡಾಲರ್ನಷ್ಟು(₹90.9 ಲಕ್ಷ ಕೋಟಿ) ಆದಾಯ ನಷ್ಟವಾಗಲಿದೆ. ಲಕ್ಷಾಂತರ ಜನರ ಬದುಕು ಸಂಕಷ್ಟಕ್ಕೊಳಗಾಗಲಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ತಿಳಿಸಿದೆ.
ಅಂತಾರಾಷ್ಟ್ರೀಯ ಪ್ರವಾಸೋದ್ಯಮವು 2020ರ ತ್ರೈಮಾಸಿಕದಲ್ಲೇ ಶೇ. 22ರಷ್ಟು ಕುಸಿತ ಕಂಡಿದೆ. 2019ರ ಪ್ರವಾಸೋದ್ಯಮ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ, ಜಾಗತಿಕ ಆರೋಗ್ಯ ಬಿಕ್ಕಟ್ಟು ವಾರ್ಷಿಕ ಪ್ರವಾಸೋದ್ಯಮ ಶೇ.60ರಿಂದ 80ರಷ್ಟು ಇಳಿಕೆ ಕಂಡಿದೆ ಎಂದು ವಿಶ್ವ ಪ್ರವಾಸೋದ್ಯಮ ಸಂಸ್ಥೆ ವಿವರಿಸಿದೆ.
ಪ್ರವಾಸೋದ್ಯಮವು ಹೆಚ್ಚಿನವರಿಗೆ ಜೀವನಾಧಾರವಾಗಿದ್ದು, ಪ್ರಸ್ತುತ ಕುಸಿತದ ಹಾದಿಯಲ್ಲಿರುವ ಕಾರಣ ಲಕ್ಷಾಂತರ ಜನರು ಕೆಲಸ ಕಳೆದುಕೊಳ್ಳವ ಭೀತಿಯಲ್ಲಿದ್ದಾರೆ. ಬಹುತೇಕ ರಾಷ್ಟ್ರಗಳಲ್ಲಿ ಲಾಕ್ಡೌನ್ ಜಾರಿಯಾಗಿರುವ ಕಾರಣ ಮಾರ್ಚ್ ನಲ್ಲಿ ಅಂತರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಶೇ.ಶೇ 57ರಷ್ಟು ಇಳಿಕೆ ಕಂಡಿದೆ. ಅಲ್ಲದೇ, ಸಂಚಾರ ನಿರ್ಬಂಧ, ವಿದೇಶ ಪ್ರಯಾಣ ಹಾಗೂ ವಿಮಾನ ಹಾರಾಟಗಳ ನಿಷೇಧದಿಂದಾಗಿ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇದರೊಂದಿಗೆ ವಿದೇಶ ಪ್ರಯಾಣಗಳ ನಿರ್ಬಂಧದಿಂದಲೂ 80 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ಸಂಸ್ಥೆಯು ಕೊರೊನಾ ಬಿಕ್ಕಟ್ಟು ಹಾಗೂ ಲಾಕ್ಡೌನ್ ಆಧರಿಸಿದಂತಹ ಮೂರು ರೀತಿಯಾದ ಚಿತ್ರಣಗಳನ್ನು ನೀಡಿದೆ. ಮೊದಲನೆಯ ಚಿತ್ರಣದಲ್ಲಿ, ಅಂತರಾಷ್ಟ್ರೀಯ ಗಡಿಗಳು ಜುಲೈನಿಂದ ಸಂಚಾರಕ್ಕೆ ಮುಕ್ತವಾಗಿ, ಪ್ರಯಾಣದ ನಿರ್ಬಂಧವು ಸಡಿಲಿಕೆಯಾದರೆ ಶೇ.58ರಷ್ಟು ಪ್ರವಾಸೋದ್ಯಮ ಇಳಿಕೆಯಾಗಲಿದೆ. ಎರಡನೇ ಚಿತ್ರಣದಲ್ಲಿ, ನಿರ್ಬಂಧವು ಸೆಪ್ಟೆಂಬರ್ನಲ್ಲಿ ಸಡಿಲಿಕೆಯಾದರೆ ಶೇ.70ರಷ್ಟು ಕಡಿಮೆಯಾಗಲಿದೆ.ಮೂರನೆಯ ಚಿತ್ರಣದಲ್ಲಿ, ನಿರ್ಬಂಧವು ನವೆಂಬರ್ವರೆಗೂ ಮುಂದುವರೆದು, ಡಿಸೆಂಬರ್ನಿಂದ ನಿರ್ಬಂಧ ಸಡಿಲಗೊಂಡರೆ ಶೇ.78ರಷ್ಟು ಅಂತರರಾಷ್ಟ್ರೀಯ ಪ್ರವಾಸಕ್ಕೆ ಹೊಡೆತ ಬೀಳಲಿದೆ.
ಮಧ್ಯ ಪ್ರಾಚ್ಯ, ಏಷ್ಯಾ, ಯುರೋಪ್ ಹಾಗೂ ಆಫ್ರಿಕಾದಲ್ಲಿ 2020ರ ಅಂತ್ಯಕ್ಕೆ ಚೇತರಿಕೆ ಕಾಣಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಈ ವರ್ಷವೇ ಅಮೆರಿಕದಲ್ಲಿ ಚೇತರಿಕೆ ಕಾಣುವ ಸಂಭವ ಕಡಿನೆ ಎನ್ನಲಾಗಿದೆ.
ವಿಶ್ವದಾದ್ಯಂತ 41 ಲಕ್ಷ ಮಂದಿಗೆ ಕೊರೊನಾ ಸೋಂಕು ತಗುಲಿದ್ದು, 2,82,719 ಮಂದಿ ಮೃತಪಟ್ಟಿದ್ದಾರೆ. ಅತಿ ಹೆಚ್ಚು ಕೊರೊನಾ ಪ್ರಕರಣಗಳು ಅಮೆರಿಕದಲ್ಲಿ ದಾಖಲಾಗಿದೆ. ಒಟ್ಟು ಕೊರೊನಾ ಪ್ರಕರಣ ಸಂಖ್ಯೆ 13 ಲಕ್ಷ ಗಡಿ ದಾಟಿದ್ದು, 80,000 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.