ವಾಷಿಂಗ್ಟನ್, ಮೇ 12 (Daijiworld News/MB) : ಕೊರೊನಾ ವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ನಡೆಯುತ್ತಿರುವ ಸಂಶೋಧನೆಯ ಮಾಹಿತಿಯನ್ನು ಕದಿಯುವ ಯತ್ನವನ್ನು ಚೀನಾದ ಹ್ಯಾಕರ್ಗಳು ಮಾಡುತ್ತಿದ್ದಾರೆ ಎಂದು ಅಮೆರಿಕ ಚೀನಾದ ವಿರುದ್ಧವಾಗಿ ಆರೋಪ ಮಾಡಿದೆ.
ಈ ಕುರಿತು ವಾಲ್ಸ್ಟ್ರೀಟ್ ಜರ್ನಲ್ ಮತ್ತು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದ್ದು ಚೀನಾ ಹ್ಯಾಕರ್ಗಳ ಕುರಿತಾಗಿ ಅಮೆರಿಕಾದ ತನಿಖಾ ಸಂಸ್ಥೆ ಎಫ್ಬಿಐ ಮತ್ತು ಸೈಬರ್ ಭದ್ರತಾ ತಜ್ಞರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ಆ ವರದಿ ತಿಳಿಸಿದೆ. ಚೀನಾ ಸರ್ಕಾರಕ್ಕಾಗಿ ಈ ಹ್ಯಾಕರ್ಗಳು ಕೊರೊನಾ ಲಸಿಕೆ ಸಂಶೋಧನಾ ಮಾಹಿತಿಯನ್ನು ಹ್ಯಾಕ್ ಮಾಡಲು ಯತ್ನಿಸಿದ್ದಾರೆ ಎಂದು ಅಮೆರಿಕಾದ ಅಧಿಕಾರಿಗಳು ಆರೋಪ ಮಾಡಿದ್ದಾರೆ.
ಇನ್ನು ಈ ಆರೋಪವನ್ನು ಅಲ್ಲಗಳೆದಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರರು, ಚೀನಾ ಎಲ್ಲ ರೀತಿಯ ಸೈಬರ್ ದಾಳಿಯ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ವಿಶ್ವದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿರುವ ಅಮೆರಿಕಾವೂ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರ ಪತ್ತೆ ಪರೀಕ್ಷೆಗೆ ಮುಂದಾಗಿದ್ದು ಅದಕ್ಕಾಗಿ ರಾಜ್ಯಗಳಿಗೆ 11 ಬಿಲಿಯನ್ ಡಾಲರ್ (8.34 ಲಕ್ಷ ಕೋಟಿ ರೂ.) ಪರಿಹಾರ ಧನ ನೀಡಲು ನಿರ್ಧಾರಿಸಿದೆ.