ಜಿನೀವಾ, ಮೇ 12 (Daijiworld News/MSP): ಮಹಾಮಾರಿ ಕೊರೊನಾ ತಡೆಯಲು ಇನ್ನು ಲಸಿಕೆ ತಯಾರಾಗಿಲ್ಲ. ಹೀಗಾಗಿ ಕೊರೊನಾ ನಿಯಂತಿಸಲು ಇದ್ದ ಏಕೈಕ ಮಾರ್ಗ ಲಾಕ್ ಡೌನ್. ಆದರೆ ಲಾಕ್ ಡೌನ್ ಕೂಡಾ ದೀರ್ಘಕಾಲ ಮಾಡಲು ಸಾಧ್ಯವಿಲ್ಲ. ಭಾರತದಲ್ಲೂ ಇದೇ ಕಾರಣಕ್ಕಾಗಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಈ ಕಾರಣಕ್ಕಾಗಿ ಭಾರತದಲ್ಲಿ ಕೊರೊನಾ ವೈರಸ್ ನ ಎರಡನೇ ಅಲೆ ಏಳುವ ಸಾದ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
ಈ ಬಗ್ಗೆ ಎಚ್ಚರಿಕೆ ನೀಡಿರುವ ಡಬ್ಲ್ಯೂ ಎಚ್ ಓ ನಿರ್ದೇಶಕ ಟೆಡ್ರೂಸ್ ಗೆಬ್ರೆಯಸ್ , ಲಾಕ್ ಡೌನ್ ನಿಯಮಗಳನ್ನು ಸಡಿಲಿಕೆ ಮಾಡಿದ ಬಳಿಕ ಕೊರೊನಾ ವೈರಸ್ ಪ್ರಕರಣಗಳು ಕಡಿಮೆಯಿದ್ದ ದಕ್ಷಿಣ ಕೊರಿಯಾ ಹಾಗೂ ಜರ್ಮನಿಯಲ್ಲಿ ಲಾಕ್ ಡೌನ್ ಸಡಿಲಿಕೆ ನಂತರ ಕೊರೊನಾ ವೈರಸ್ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿದೆ ಎಂದು ಹೇಳಿದ್ದಾರೆ.
ಬಹುತೇಕ ರಾಷ್ಟ್ರಗಳು ಲಾಕ್ ಡೌನ್ ಸಡಿಲಿಕೆ ಮಾಡಿರುವುದು ಸಮಾಧಾನ ತಂದಿದೆ. ಆದರೆ ಕೊರೊನಾ ವೈರಸ್ ಸೋಂಕಿನ ಬಗ್ಗೆ ಇನ್ಮುಂದೆ ಇನ್ನಷ್ಟು ಎಚ್ಚರಿಕೆಯಿಂದ ಇರಬೇಕು. ಸೋಂಕು ಸಣ್ಣ ಪ್ರಮಾಣದಲ್ಲಿ ಹುಟ್ಟಿಕೊಂಡು ಅದು ಮತ್ತೆ ಹರಡುವ ಬಗ್ಗೆ ಯಾವುದೇ ಸಂಶಯವಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಡಾ.ಮೈಕ್ ಹೇಳಿದ್ದಾರೆ.