ನೈರೋಬಿ, ಮೇ 12 (Daijiworld News/MB) : ಜಗತ್ತಿನಾದ್ಯಂತ ಕೊರೊನಾದ ಭೀತಿ ಇದೆ, ಆದರೆ ಆಫ್ರಿಕಾದ ಜನರಿಗೆ ಕೊರೊನಾ ವೈರಸ್ ಹೇರ್ಸ್ಟೈಲ್ ಟ್ರೆಂಡ್ ಆಗಿದೆ.
ಈ ಕೊರೊನಾ ಹೇರ್ಸ್ಟೈಲ್ ಟ್ರೆಂಡ್ ಆಗುತ್ತಿದ್ದರೂ ಕೂಡಾ ಇದರ ಹಿಂದೆ ಮನಕಲಕುವ ಕತೆಯಿದೆ. ಹೌದು ಕೊರೊನಾದಿಂದಾಗಿ ಆರ್ಥಿಕವಾಗಿ ಬಹಳ ಸಂಕಷ್ಟ ಉಂಟಾಗಿದ್ದು ಕೂದಲು ಕತ್ತರಿಸಲು ಹಣವಿಲ್ಲದ ಕಾರಣ ತಾಯಂದಿರು ತಮ್ಮ ಮಕ್ಕಳ ಕೂದಲನ್ನು ಕೊರೊನಾ ಆಕಾರದಲ್ಲಿ ಕಟ್ಟುತ್ತಿದ್ದಾರೆ ಎಂದು ಹೇಳಲಾಗಿದೆ.
ಈಗ ಅದೇ ಹೇರ್ಸ್ಟೈಲ್ ಟ್ರೆಂಡ್ ಆಗಿದ್ದು ನಿರ್ದಿಷ್ಟವಾಗಿ ಪೂರ್ವ ಆಫ್ರಿಕದಲ್ಲಿ ಈಗ ವಧುಗಳಿಗೂ ಈ ಹೇರ್ಸ್ಟೈಲ್ ಇಷ್ಟವಾಗಿದೆ. ಕ್ಷೌರಿಕರೂ ಕೂಡಾ ಇದೇ ಹೇರ್ಸ್ಟೈಲ್ ಮಾಡಲು ಆರಂಭಿಸಿದ್ದಾರೆ.
ಈ ಕುರಿತು ಮಾತನಾಡಿರುವ ಆಫ್ರಿಕಾದ ಮಹಿಳೆಯೊಬ್ಬರು ಇದು ಅಗ್ಗವಾದ ಹೇರ್ಸ್ಟೈಲ್ ಆಗಿದ್ದು ಕೊರೊನಾ ಕುರಿತಾಗಿ ಜಾಗೃತಿ ಮೂಡಿಸಲು ಸಾಧ್ಯವಾಗುತ್ತದೆ ಎಂದಿದ್ದಾರೆ.
ಇತ್ತೀಚೆಗೆ ಈ ಹೇರ್ಸ್ಟೈಲ್ ಬಹಳ ಪ್ರಸಿದ್ಧಿಯಾಗಿದ್ದು, ಭಾರತ, ಚೀನಾ ಹಾಗೂ ಬ್ರೆಜಿಲ್ನಿಂದ ಸಿಂಥೇಟಿಕ್ ಹಾಗೂ ನೈಜ ಕೂದಲು ಆಮದು ಮಾಡಿಕೊಳ್ಳುವುದಕ್ಕೆ ಪ್ರಾರಂಭವಾದಾಗಿನಿಂದ ಆಫ್ರಿಕಾದ ಸಲೂನ್ಗಳಲ್ಲಿ ಈ ಹೇರ್ಸ್ಟೈಲ್ ಜನಪ್ರಿಯತೆ ಪಡೆದಿತ್ತು. ಇದೀಗ ಕೀನ್ಯಾದ ರಾಜಧಾನಿ ನೈರೋಬಿಯ ಸ್ಲಂ ಕಿಬೆರಾದ ಸಲೂನ್ ಒಂದರಲ್ಲಿ ಹೇರ್ ಸ್ಟೈಲಿಸ್ಟ್ ಶಾರೋನ್ ರೇಫಾ ಎಂಬವರು ಯುವತಿಯರ ಕೂದಲನ್ನು ಆಂಟೇನಾ ರೀತಿಯಾಗಿ ಮಾಡಿ ಅದಕ್ಕೆ ಕೊರೊನಾ ವೈರಸ್ ಹೇರ್ಸ್ಟೈಲ್ ಎಂದು ಹೆಸರಿಟ್ಟಿದ್ದಾರೆ.