ವಾಷಿಂಗ್ಟನ್, ಮೇ 12 (Daijiworld News/MSP): ಚೀನಾ ಜೊತೆಗೆ ಮತ್ತೆ ವಾಣಿಜ್ಯ ವಹಿವಾಟು ಮುಂದುವರಿಸುವ ಬಗ್ಗೆ ಯಾವುದೇ ಆಸಕ್ತಿ ಇಲ್ಲ ಎಂದು ನೇರವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಚೀನಾದ ವಾಣಿಜ್ಯ ಸಮರ ಮತ್ತು ಕೊರೊನಾ ವೈರಸ್ ನಿಂದ ಟ್ರಂಪ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಶ್ವೇತಭವನದ ರೋಸ್ಗಾರ್ಡನ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಟ್ರಂಪ್, ಚೀನಾ ಜೊತೆ ಮತ್ತೆ ವಾಣಿಜ್ಯ ಸಂಬಂಧ ಕುದುರಿಸುವ ಸಾಧ್ಯತೆಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಅವರು ಈ ಕುರಿತು "ಇಲ್ಲ, ಇಲ್ಲ. ಸ್ವಲ್ಪವೂ ಇಲ್ಲ, ಯಾವುದೇ ಆಸಕ್ತಿ ಇಲ್ಲ" ಎಂದು ಹೇಳಿದ್ದಾರೆ.
ಅಮೆರಿಕ ಮತ್ತು ಚೀನಾ ನಡುವೆ ಭುಗಿಲೆದ್ದ ವಾಣಿಜ್ಯ ಸಮರವನ್ನು ಶಮನಗೊಳಿಸಲು ಈ ವರ್ಷಾರಂಭದಲ್ಲಿ ವಾಷಿಂಗ್ಟನ್ ಸಲ್ಲಿಸಿದ್ದ ದ್ವಿಪಕ್ಷೀಯ ಒಪ್ಪಂದ ಪ್ರಸ್ತಾವನೆಯನ್ನು ಬೀಜಿಂಗ್ ಗೌರವಿಸಿಲ್ಲ. ಇದಕ್ಕಾಗಿ ಆ ದೇಶವು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಟ್ರಂಪ್ ಮತ್ತೊಮ್ಮೆ ಗಂಭೀರ ಎಚ್ಚರಿಕೆ ನೀಡಿದ್ದಾರೆ.