ರೋಮ್, ಮೇ 16 (DaijiworldNews/PY) : ಮಾಹಾಮಾರಿ ಕೊರೊನಾ ವೈರಸ್ನಿಂದ ಕಂಗೆಟ್ಟಿರುವ ಇಟಲಿ ಜೂನ್ 3ರಿಂದ ವಿದೇಶಿ ಪ್ರಯಾಣಕ್ಕೆ ಅನುಮತಿ ನೀಡಿದೆ. ವಿದೇಶದಿಂದ ಬರುವವರು ಹಾಗೂ ವಿದೇಶಕ್ಕೆ ಪ್ರಯಾಣಿಸುವವರಿಗೆ ಅನುಮತಿ ನೀಡಿ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿದೆ.
ಕೆಲವು ಪ್ರದೇಶಗಳನ್ನು ಹೊರತುಪಡಿಸಿ ಬಹುತೇಕ ಸ್ಥಳಗಳಲ್ಲಿ ಲಾಕ್ಡೌನ್ ನಿಯಮಗಳನ್ನು ಸಡಿಲಿಕೆ ಮಾಡುವ ಮೂಲಕ ದೇಶಾದ್ಯಂತ ಅದೇ ದಿನದಿಂದ ಸಾರ್ವಜನಿಕರ ಓಡಾಟಕ್ಕೂ ಅನುಮತಿ ನೀಡಲಾಗಿದೆ.
ಇಟಲಿ ಪ್ರಧಾನಿ ಗಿಯಸೆಪ್ಪೆ ಕಾಂಟೆ ಮಾತನಾಡಿ, ಎರಡನೇ ಹಂತದ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಸಾರ್ವಜನಿಕರು ಮುಂಜಾಗ್ರತೆ ವಹಿಸುವುದರೊಂದಿಗೆ ಸಾಮಾನ್ಯ ಸ್ಥಿತಿಗೆ ಮರಳಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.
ಇಲ್ಲಿಯವರೆಗೆ ಇಟಲಿಯಲ್ಲಿ 2,23,885 ಮಂದಿ ಕೊರೊನಾ ಸೋಂಕಿತರಿದ್ದು, 31,610 ಮಂದಿ ಸಾವನ್ನಪ್ಪಿದ್ದಾರೆ. ಹೆಚ್ಚು ಸಾವನ್ನಪ್ಪಿದವರ ಪಟ್ಟಿಯಲ್ಲಿ ಮೊದಲ ಎರಡನೆ ಸ್ಥಾನದಲ್ಲಿ ಅಮೆರಿಕ ಹಾಗೂ ಇಂಗ್ಲೇಡ್ ಇದ್ದರೆ, ಮೂರನೇ ಸ್ಥಾನದಲ್ಲಿ ಇಟಲಿ ಇದೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಮಾರ್ಚ್ ನಲ್ಲಿ ಇಟಲಿ ರಾಷ್ಟ್ರವ್ಯಾಪ್ತಿ ಲಾಕ್ಡೌನ್ ಜಾರಿಗೊಳಿಸಿತು. ಸೋಂಕು ನಿಯಂತ್ರಣಕ್ಕೆ ಬಂದ ನಂತರ ಮೇ 4ರಂದು ಲಾಕ್ಡೌನ್ ಸಡಿಲಿಕೆಗೆ ಸರ್ಕಾರ ಅನುಮತಿ ನೀಡಿತ್ತು.
ಅಂಗಡಿ, ವ್ಯಾಪಾರ ವಹಿವಾಟುಗಳು ಮೇ 18ರಂದು ಆರಂಭವಾಗಲಿದ್ದು, ವಿದೇಶೀ ಪ್ರಯಾಣಕ್ಕೆ ಅದೇ ದಿನ ಅನುಮತಿ ನೀಡಲು ಸರ್ಕಾರ ಮುಂದಾಗಿದೆ.
ಆರೋಗ್ಯ ಅಧಿಕಾರಿಗಳ ಶಿಫಾರಸ್ಸಿನ ಅನ್ವಯ, ಹೊಟೇಲ್, ರೆಸ್ಟೋರೆಂಟ್ ಹಾಗೂ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಯೊಂದಿಗೆ ಸ್ವಚ್ಛತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚನೆ ನೀಡಲಾಗಿದೆ.