ವಾಷಿಂಗ್ಟನ್, ಮೇ 18 (DaijiworldNews/PY) : ಕಾನೂನು ಬಾಹಿರವಾಗಿ ದಕ್ಷಿಣ ಗಡಿಭಾಗದ ಮೆಕ್ಸಿಕೋದಿಂದ ದೇಶದೊಳಗೆ ಆಗಮಿಸಿದ ಸುಮಾರು 161 ಭಾರತೀಯ ಪ್ರಜೆಗಳನ್ನು ಈ ವಾರ ಅಮೆರಿಕ ಗಡಿಪಾರು ಮಾಡಿರುವುದಾಗಿ ವರದಿ ತಿಳಿಸಿದೆ.
ಗಡಿಪಾರು ಆಗಿರುವ ಎಲ್ಲರನ್ನೂ ಪಂಜಾಬ್ನ ಅಮೃತ್ಸರಕ್ಕೆ ವಿಶೇಷ ಮಿಮಾನದಲ್ಲಿ ಕಳುಹಿಸಲಾಗಿದೆ. ಪಂಜಾಬ್ನ 56, ತೆಲಂಗಾಣ, ಕೇರಳ, ತಮಿಳುನಾಡಿನ ತಲಾ ಇಬ್ಬರು, ಉತ್ತರಪ್ರದೇಶದ 5, ಹರಿಯಾಣದ 76 ಮಂದಿ, ಗುಜರಾತ್ನ 12, ಮಹಾರಾಷ್ಟ್ರದ 4, ಗೋವಾ ಹಾಗೂ ಆಂಧ್ರಪ್ರದೇಶದ ಒಬ್ಬರನ್ನು ಗಡಿಪಾರು ಮಾಡಲಾಗಿದೆ.
ಅಮೆರಿಕದೊಳಕ್ಕೆ ಅಕ್ರಮವಾಗಿ ಪ್ರವೇಶ ಮಾಡಿರುವ 1,739 ಭಾರತೀಯರು ಅಮೆರಿಕದ 95 ಜೈಲುಗಳಲ್ಲಿ ಇದ್ದಾರೆ ಎಂದು ಉತ್ತರ ಅಮೆರಿಕನ್ ಪಂಜಾಬಿ ಅಸೋಸಿಯೇಷನ್ನ ಕಾರ್ಯಕಾರಿ ನಿರ್ದೇಶಕ ಸಟ್ನಾಮ್ ಸಿಂಗ್ ಹೇಳಿದ್ದಾರೆ.
ಐಸಿಇ ವರದಿಯ ಪ್ರಕಾರ, ಅಮೆರಿಕ 611 ಭಾರತೀಯರನ್ನು 2018ರಲ್ಲಿ ಗಡಿಪಾರು ಮಾಡಿತ್ತು. ಈ ವರ್ಷ ಗಡಿಪಾರು ಮಾಡಲಾಗಿರುವ 161 ಜನರಲ್ಲಿ ಮೂವರು ಮಹಿಳೆಯರು ಸೇರಿರುವುದಾಗಿ ಎನ್ಎಪಿಎ ತಿಳಿಸಿದೆ.