ವಾಷಿಂಗ್ಟನ್, ಮೇ 20 (DaijiworldNews/PY) : ಕಳೆದ ಮೂರು ವರ್ಷಗಳ ದುಡಿಮೆಯನ್ನು ಕೊರೊನಾ ಕಿತ್ತುಕೊಂಡಿದೆ. ಇದು ವಿಶ್ವದ ವಿವಿಧ ದೇಶಗಳಲ್ಲಿ 6 ಕೋಟಿ ಜನರನ್ನು ಅತಿ ಬಡತನಕ್ಕೆ ತಳ್ಳಲಿದೆ ಎಂದು ವಿಶ್ವಬ್ಯಾಂಕ್ ಮುಖ್ಯಸ್ಥರು ಹೇಳಿದ್ದಾರೆ.
ವಿಶ್ವಬ್ಯಾಂಕ್ ವಿಶ್ವದ ನೂರು ದೇಶಗಳಲ್ಲಿ ವಿವಿಧ ಯೋಜನೆಗಳಿಗೆ ಆರ್ಥಿಕ ನೆರವು ನೀಡುತ್ತಿದೆ. ವಿವಿಧ ದೇಶಗಳಿಗ ಮುಂದಿನ 15 ತಿಂಗಳಲ್ಲಿ 160 ಶತಕೋಟಿ ಡಾಲರ್ ಮೊತ್ತವನ್ನು ನೀಡಲಿದೆ. ಈ ದೇಶಗಳಲ್ಲಿ ವಿಶ್ವದ ಶೇ. 70ರಷ್ಟು ಜನಸಂಖ್ಯೆಯಿದೆ ಎಂದು ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಲ್ಪಾಸ್ ಕಾನ್ಫರೆನ್ಸ್ ಕಾಲ್ನಲ್ಲಿ ತಿಳಿಸಿದರು.
ಈ ಬಗ್ಗೆ ಮಾತನಾಡಿದ ಅವರು, ಈ ವರ್ಷ ವಿಶ್ವದ ಆರ್ಥಿಕತೆ ಶೇ.5ರಷ್ಟು ಇಳಿಕೆಯಾಗಬಹುದು. ಇದು ಬಡ ದೇಶಗಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದರು.
ಕೊರೊನಾವು, ಕಳೆದ ಮೂರು ವರ್ಷಗಳಲ್ಲಿ ಬಡತನ ನಿರ್ಮೂಲನ ಲಾರ್ಯಕ್ರಮಗಳ ಮೂಲಕ ಸಾಧಿಸಲಾಗಿದ್ದ ಪ್ರಗತಿಯನ್ನು ಹಾಳುಗೆಡವಿದೆ. ನಮ್ಮನ್ನು ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತ ಕಾಡಲಿದೆ ಎಂದು ಹೇಳಿದರು.
ವಿಶ್ವಬ್ಯಾಂಕ್ ಇಲ್ಲಿಯವರೆಗೆ ಬಡ ದೇಶಗಳಿಗೆ ಆರೋಗ್ಯ ವ್ಯವಸ್ಥೆ ಸುಧಾರಣೆ ಮಾಡಲು, ಸಾಮಾಜಿಕ ಭದ್ರತಾ ಹಾಗೂ ಆರ್ಥಿಕ ಯೋಜನೆಗಳಿಗಾಗಿ 5.5 ಶತಕೋಟಿ ಡಾಲರ್ ವೆಚ್ಚ ಮಾಡಿದೆ.
ವಿಶ್ವಬ್ಯಾಂಕ್ ಕೇವಲ ಬಡ ರಾಷ್ಟ್ರಗಳಿಗೆ ನೆರವು ನೀಡಿದರೆ ಅವುಗಳ ಪರಿಸ್ಥಿತಿ ಸರಿಯಾಗುವುದಿಲ್ಲ. ದ್ವಿಪಕ್ಷೀಯ ಸಹಕಾರಕ್ಕೆ ಶ್ರೀಮಂತ ರಾಷ್ಟ್ರಗಳು ಪ್ರಾಮುಖ್ಯತೆ ನೀಡಿ, ಬಡ ದೇಶಗಳ ಆರ್ಥಿಕ ಏಳ್ಗೆಗೆ ಸಹಾಯ ಮಾಡಬೇಕು ಎಂದರು.
ಬೇರೆ ದೇಶಗಳಿಗೆ ತೆರಳಿರುವ ಕಾರ್ಮಿಕರು ಅಲ್ಲಿಂದ ದುಡಿಮೆ ಮಾಡಿ ಕಳಿಸುವ ಹಣ ಹಾಗೂ ಪ್ರವಾಸೋದ್ಯಮ ಆದಾಯಗಳು ಅಭಿವೃದ್ದಿಶೀಲ ದೇಶಗಳ ಮುಖ್ಯ ಆದಾಯದ ಮೂಲವಾಗಿದೆ. ಇದು ಆರ್ಥಿಕತೆಯೆ ಪುನಶ್ಚೇತನಕ್ಕೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಈ ಪ್ರಸ್ತಾವವನ್ನು ಈವರೆಗೆ 14 ದೇಶಗಳು ಅನುಮೋದಿಸಿದ್ದು, ಉಳಿದ ದೇಶಗಳಿಂದ ಈ ಬಗ್ಗೆ ಆಶಾದಾಯಕ ಸ್ಪಂದನೆ ವ್ಯಕ್ತವಾಗಿದೆ.