ಕರಾಚಿ, ಮೇ 23 (Daijiworld News/MB) : ಶುಕ್ರವಾರ ಮಧ್ಯಾಹ್ನ ಪಾಕಿಸ್ತಾನದ ಕರಾಚಿಯಲ್ಲಿ ನಡೆದ ವಿಮಾನ ದುರಂತದಲ್ಲಿ 97 ಮಂದಿ ಮೃತಪಟ್ಟಿದ್ದು, ಇಬ್ಬರು ಅದೃಷ್ಟವಶಾತ್ ಪಾರಾಗಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿ ಒಟ್ಟು 91 ಮಂದಿ ಪ್ರಯಾಣಿಕರು ಹಾಗೂ 8 ಮಂದಿ ಸಿಬ್ಬಂದಿಗಳಿದ್ದು ಈ ಪೈಕಿ 97 ಜನರು ಸಾವನ್ನಪ್ಪಿದ್ದಾರೆ. ಈವರೆಗೆ 19 ಮಂದಿಯ ಗುರುತು ಪತ್ತೆ ಹಚ್ಚಲಾಗಿದೆ ಎಂದು ವರದಿಯಾಗಿದೆ.
ಕರಾಚಿಯ ಮಾಡೆಲ್ ಕಾಲೋನಿಯ ಮನೆಗಳ ಮೇಲೆಯೇ ವಿಮಾನ ಪತನಗೊಂಡಿದ್ದು, ಕೆಲ ಕ್ಷಣಗಳಲ್ಲಿಯೇ ಇಡೀ ಪ್ರದೇಶದಲ್ಲಿ ಬೆಂಕಿಯ ಜ್ವಾಲೆ ಆವರಿಸಿಕೊಂಡಿತು. ಈ ಘಟನೆಯಲ್ಲಿ ಹಲವು ಮನೆಗಳು ಮತ್ತು ವಾಹನಗಳು ಜಖಂಗೊಂಡಿವೆ. ಈ ಪ್ರದೇಶದಲ್ಲಿನ ಸುಮಾರು 30 ಮಂದಿ ತೀವ್ರ ಗಾಯಗೊಂಡಿದ್ದರು.
ವಿಮಾನ ಇಳಿಸುವಾಗ ತಾಂತ್ರಿಕ ಸಮಸ್ಯೆಯಾಗುತ್ತಿದೆ ಎಂದು ಪೈಲಟ್ ಮಾಹಿತಿ ನೀಡಿದ್ದರು. ಕರಾಚಿ ವಿಮಾನ ನಿಲ್ದಾಣದ ಜತೆ ವಿಮಾನವು ಮಧ್ಯಾಹ್ನ 2.37ರ ಸುಮಾರಿಗೆ ಸಂಪರ್ಕ ಕಳೆದುಕೊಂಡಿತು ಎಂದು ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ತಿಳಿಸಿದ್ದರು.