ಪಿತೋರ್ಗಢ, ಮೇ 24 (DaijiworldNews/PY) : ಗಡಿ ವಿಚಾರದಲ್ಲಿ ಭಾರತದೊಂದಿಗೆ ನೇರ ಸಂಘರ್ಷಣೆ ಮಾಡಿರುವ ನೇಪಾಳ ಈಗ ಚೀನಾಕ್ಕೆ ಆಪ್ತವಾಗಿದ್ದು, ಇದೀಗ 12 ವರ್ಷಗಳ ಹಳೇಯ ಗಡಿ ರಸ್ತೆ ಯೋಜನೆಯೊಂದಕ್ಕೆ ಮತ್ತೆ ಚಾಲನೆ ನೀಡಿದೆ.
ಈ ರಸ್ತೆ ಯೋಜನೆಯಿಂದ ವ್ಯಾಪಾರ ವಹಿವಾಟುಗಳು ಮಾತ್ರ ವೃದ್ದಿಯಾಗುವುದಲ್ಲದೇ, ಪ್ರವಾನಿಗಳ ಹಾಗೂ ಯಾತ್ರಾರ್ಥಿಗಳ ಸಂಚಾರಕ್ಕೂ ಸಹಾಯವಾಗಲಿದೆ ಎಂದು ಹೇಳಲಾಗಿದೆ. ಕಳೆದ 12 ವರ್ಷಗಳಲ್ಲಿ ಕೇವಲ 43 ಕಿ.ಮೀ ಮಾತ್ರ ಕಾಮಗಾರಿ ಮುಗಿದಿದ್ದು, ನಿರಂತರವಾದ ನಷ್ಟದಿಂದಾಗಿ ಗುತ್ತಿಗೆದಾರ ಕಾಮಗಾರಿ ಕೈ ಬಿಟ್ಟಿದ್ದರು.
2008ರಲ್ಲಿ 130 ಕಿ.ಮೀ ಉದ್ದದ ದಾರ್ಚುಲಾ-ಟಿಂಕರ್ ರಸ್ತೆ ಯೋಜನೆ ಅನುಮೋದನೆ ಪಡೆದಿತ್ತು. ಈ ರಸ್ತೆಯು ನೇಪಾಳ-ಚೀನಾ ಗಡಿ ವ್ಯಾಪಾರಕ್ಕೆ ಟಿಂಕರ್ ಪಾಸ್ ಮೂಲಕ ವ್ಯಾಪಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಲಾಗಿದೆ. ಈ ರಸ್ತೆಯು ಸುಮಾರು 50 ಕಿ.ಮೀ ಭಾಗ ಭಾರತದ ಗಡಿಯಲ್ಲಿ ಉತ್ತರಾಖಂಡಕ್ಕೆ ಪರ್ಯಾಯವಾಗಿ ಸಾಗಲಿದೆ. ಇನ್ನು ನೇಪಾಳದ ಅಧಿಕಾರಿಗಳು ರಸ್ತೆ ನಿರ್ಮಾಣ ಕಾರ್ಯ ಆರಂಭವಾಗಿರುವುದನ್ನು ಸ್ಪಷ್ಟಪಡಿಸಿದ್ದು, ನೇಪಾಳವು, ರಸ್ತೆಯ ಉಳಿದ ಭಾತ ಪೂರ್ತಿಗೊಳಿಸಲು ತನ್ನ ಸೇನೆಯ ನೆರವನ್ನು ಪಡೆಯಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ.