ಬೀಜಿಂಗ್, ಮೇ 25 (Daijiworld News/MB) : ಬೇರೆ ಬೇರೆ ರೀತಿಯ ರಾಜಕೀಯ ಸಿದ್ಧಾಂತ ಹಾಗೂ ಸಂಸ್ಕೃತಿಯ ಮಧ್ಯೆಯೂ ಚೀನಾ ಮತ್ತು ಅಮೆರಿಕಾದ ನಡುವೆ ಶಾಂತಿಯುತ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ಚೀನಾ ವಿದೇಶಿ ಸಚಿವರಾದ ವಾಂಗ್ ಯಿ ಅಭಿಪ್ರಾಯ ಪಟ್ಟಿದ್ದಾರೆ.
ಈ ಬಗ್ಗೆ ಭಾನುವಾರ ವಾರ್ಷಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪರಸ್ಪರ ಶಾಂತಿಯುತವಾಗಿ ನಡೆಯುವ ಬಗ್ಗೆ ಹೊಸ ಮಾರ್ಗವನ್ನು ಚೀನಾ ಹಾಗೂ ಅಮೆರಿಕ ದೇಶಗಳು ಕಂಡುಕೊಳ್ಳಬೇಕು. ವಿಭಿನ್ನವಾದ ಸಂಸ್ಕೃತಿ ರಾಜಕೀಯವಿದ್ದರೂ ಭಿನ್ನಾಭಿಪ್ರಾಯವಿದ್ದರೂ ಪರಸ್ಪರ ಸಹಬಾಳ್ವೆ ಸಾಧ್ಯ ಎಂಬುದನ್ನು ಸಾಬೀತುಪಡಿಸಬೇಕು ಎಂದು ತಿಳಿಸಿದ್ದಾರೆ.
ಅಮೆರಿಕಾ ಅತೀದೊಡ್ಡ ಅಭಿವೃದ್ಧಿಯಾಗಿರುವ ರಾಷ್ಟ್ರವಾಗಿದೆ. ಚೀನಾ ಬೃಹತ್ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿದೆ. ಇವೆರಡು ರಾಷ್ಟ್ರಗಳಿಗೂ ಜಾಗತಿಕ ಶಾಂತಿ ಮತ್ತು ಅಭಿವೃದ್ಧಿಯಲ್ಲಿ ಮಹತ್ತರವಾದ ಜವಾಬ್ದಾರಿಯಿದೆ ಎಂದು ಹೇಳಿದ್ದಾರೆ.
ಹಾಗೆಯೇ ಚೀನಾಕ್ಕೆ ಅಮೆರಿಕವನ್ನು ಬದಲಿಸುವ ಇಲ್ಲವೇ ಪರಿವರ್ತಿಸುವ ಯಾವುದೇ ಉದ್ದೇಶವೂ ಇಲ್ಲ. ಚೀನಾವನ್ನು ಬದಲು ಮಾಡುವ ಯತ್ನವನ್ನು ಅಮೆರಿಕಾ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.