ಜಿನಿವಾ, ಮೇ 26 (DaijiworldNews/PY) : ಮಲೇರಿಯಾ ತಡೆ ಔಷಧ ಹೈಡ್ರಾಕ್ಸಿಕ್ಲೋರೋಕ್ವಿನ್ನ ಕ್ಲಿನಿಕಲ್ ಟ್ರಯಲ್ಗೆ ವಿಶ್ವ ಆರೋಗ್ಯ ಸಂಸ್ಥೆಯು ತಾತ್ಕಾಲಿಕ ತಡೆ ನೀಡಿದ್ದು, ಈ ನಿರ್ಧಾರವನ್ನು ಮುನ್ನೆಚ್ಚರಿಕಾ ದೃಷ್ಠಿಯಿಂದ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.
ಕೊರೊನಾ ರೋಗಿಗಳಿಗೆ ಮಲೇರಿಯಾ ರೋಗಿಗಳಿಗೆ ನೀಡುವ ಹೈಡ್ರೊಕ್ಲೋರೊಕ್ವಿನ್ ಹಾಗೂ ಕ್ಲೋರೊಕ್ವಿನ್ ಮಾತ್ರೆಗಳ ಸೇವನೆಯಿಂದ ಯಾವುದೇ ಉಪಯೋಗವಿಲ್ಲ. ಬದಲಾಗಿ ಈ ಮಾತ್ರೆಗಳು ಕೊರೊನಾ ರೋಗಿಗಳು ಸಾವನ್ನಪ್ಪುವ ಅಪಾಯವನ್ನು ಹೆಚ್ಚಿಸುತ್ತವೆ ಎಂದು ವರದಿಯೊಂದು ತಿಳಿಸಿತ್ತು. ಇದನ್ನು ವಿಶ್ವ ಆರೋಗ್ಯ ಸಂಸ್ಥೆ ಗಂಭೀರವಾಗಿ ಪರಿಗಣಿಸಿದ್ದು, ಈ ತೀರ್ಮಾನವನ್ನು ತೆಗೆದುಕೊಂಡಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಸುರಕ್ಷತೆ ಕುರಿತು ಬಂದಿರುವ ಪ್ರಶ್ನೆಯ ಹಿನ್ನೆಲೆ, ಆರೋಗ್ಯ ಸಂಸ್ಥೆಯ ಕಾರ್ಯನಿರ್ವಾಹಕ ತಂಡವು ಕ್ಲಿನಿಕಲ್ ಟ್ರಯಲ್ಗೆ ತಾತ್ಕಾಲಿಕ ತಡೆ ನೀಡಿದ್ದು, ಇನ್ನುಳಿದಂತಹ ಎಲ್ಲಾ ಪ್ರಯೋಗಗಳು ಎಂದಿನಂತೆಯೇ ನಡೆಯಲಿವೆ ಎಂದು ಟೆಡ್ರೋಸ್ ಹೇಳಿದ್ದಾರೆ.
ಕೊರೊನಾ ವೈರಸ್ ಔಷಧ ಕಂಡು ಹಿಡಿಯುವ ನಿಟ್ಟಿನಲ್ಲಿ ವಿಶ್ವದಾದ್ಯಂತ ಸಾವಿರಾರು ಆಸ್ಪತ್ರೆಗಳ ಕ್ಲಿನಿಕಲ್ ಟ್ರಯಲ್ಗಾಗಿ ರೋಗಿಗಳನ್ನು ಆರೋಗ್ಯ ಸಂಸ್ಥಯೆ ಕಾರ್ಯನಿರ್ವಾಹಕ ಗುಂಪಿನ ಸಾಲಿಡಾರಿಟಿ ಟ್ರಯಲ್ನಲ್ಲಿ ನೊಂದಾವಣೆ ಮಾಡಿವೆ. ಮಲೇರಿಯಾ ನಿರೋಧಕ ಹೈಡ್ರಾಕ್ಸಿಕ್ಲೋರೋಕ್ವಿನ್ನ ಬಳಕೆಯನ್ನು ಈ ಕ್ಲಿನಿಕಲ್ ಪ್ರಯೋಗದಲ್ಲಿ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.