ಬೀಜಿಂಗ್, ಮೇ 26 (DaijiworldNews/PY) : ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿರುವ ಬೆನ್ನಲೇ ಚೀನಾ ಪ್ರಜೆಗಳನ್ನು ಪುನಃ ಕರೆಸಿಕೊಳ್ಳಲು ಅಲ್ಲಿನ ಸರ್ಕಾರ ಮುಂದಾಗಿದ್ದು, ವಿಶೇಷ ವಿಮಾನ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ನೋಂದಣಿಯನ್ನು ಬುಧವಾರದ ಒಳಗೆ ಮಾಡಿಕೊಳ್ಳುವಂತೆ ಚೀನಾ ಪ್ರಜೆಗಳಿಗೆ ನವದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿ ತಿಳಿಸಿದೆ.
ಭಾರತದಿಂದ ವಾಪಾಸ್ಸಾಗುವವರು ವಿಮಾನಯಾನದ ವೆಚ್ಚವನ್ನು ಅವರೇ ಭರಿಸಬೇಕು. ಅಲ್ಲದೇ 14 ದಿನಗಳ ಕ್ವಾರಂಟೈನ್ಗೆ ಒಳಗಾಗಬೇಕು ಎಂದು ರಾಯಭಾರ ಕಚೇರಿ ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ. ಕೊರೊನಾ ಸೋಂಕಿನ ಲಕ್ಷಣ ಇರುವವರಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಅವಕಾಶವಿಲ್ಲ ಎಂದು ತಿಳಿಸಲಾಗಿದೆ.
ಭಾರತದಲ್ಲಿ ಕೊರೊನಾ ಪ್ರಕರಣಗಳು ಜಾಸ್ತಿಯಾಗುತ್ತಿರುವುದು ಮಾತ್ರವಲ್ಲದೇ, ಭಾರತ–ಚೀನಾ ಸೇನಾ ಪಡೆಗಳ ಮಧ್ಯೆ ಪೂರ್ವ ಲಡಾಕ್ ಗಡಿ ಪ್ರದೇಶದಲ್ಲಿ ಸಂಘರ್ಷ ಹೆಚ್ಚಾಗಿರುವುದರಿಂದ ಚೀನಾವು ಈ ತೀರ್ಮಾನ ಕೈಗೊಳ್ಳಲು ಕಾರಣವಿರಬಹುದು ಎಂದು ಹೇಳಲಾಗುತ್ತಿದೆ.
ಆದರೆ, ಈ ಬಗ್ಗೆ ಚೀನಾ ರಾಯಭಾರ ಕಚೇರಿಯ ನೋಟಿಸ್ನಲ್ಲಿ ಉಲ್ಲೇಖವಾಗಿಲ್ಲ.
ಭಾರತದಲ್ಲಿ ಕಳೆದ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ಅತೀ ಹೆಚ್ಚು ಕೊರೊನಾ ಪ್ರಕರಣ ದಾಖಲಾಗಿರುವ ಅಗ್ರ ಹತ್ತು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿದೆ.