ವಿಯೆಟ್ನಾಂ, ಮೇ 28 (Daijiworld News/MSP): ವಿಯೆಟ್ನಾಂನಲ್ಲಿ ಉತ್ಖನನದ ವೇಳೆ ಬೃಹತ್ ಗಾತ್ರದ ಶಿವಲಿಂಗವೊಂದು ದೊರಕಿದ್ದು ಈ ವಿಚಾರವನ್ನು ಭಾರತೀಯ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಬುಧವಾರ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ವಿಯೆಟ್ನಾಂನ ಕ್ವಾಂಗ್ ನಾಮ್ ಪ್ರಾಂತ್ಯದ ಮೈ ಸನ್ನಲ್ಲಿ ಚಾಮ್ ದೇಗುಲಗಳ ಪುನಾರಾಚನೆ ಕಾರ್ಯದಲ್ಲಿ ತೊಡಗಿರುವ ಭಾರತೀಯ ಪುರಾತತ್ವ ಇಲಾಖೆಯ ತಂಡಕ್ಕೆ ಈ ಬೃಹತ್ ಶಿವಲಿಂಗ ದೊರಕಿದೆ. ಭಾರತದ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ, ಹಿಂದೂ ಧರ್ಮದ ಆರಾಧನೆಯಲ್ಲಿ ತೊಡಗಿದ್ದ ಚಂಪಾ ನಾಗರಿಕತೆ ಅಥವಾ ಚಾಮ್ ನಾಗರಿಕತೆಯು ಮಧ್ಯ ವಿಯೆಟ್ನಾಂನಲ್ಲಿ 9ನೇ ಶತಮಾನಕ್ಕೂ ಹಿಂದೆ ಉತ್ತುಂಗದಲ್ಲಿತ್ತು. ಆ ಕಾಲದಲ್ಲಿ ಇಂದ್ರಪುರ ಎಂಬುದು ಅದರ ರಾಜಧಾನಿಯಾಗಿತ್ತು ಎನ್ನಲಾಗಿದೆ. ಎರಡನೇ ರಾಜ ಇಂದ್ರವರ್ಮ ಈ ದೇಗುಲ ನಿರ್ಮಿಸಿದ್ದ. ಚಾಮ್ ನಾಗರಿಕತೆ ಕಾಲದಲ್ಲೇ ವಿಯೆಟ್ನಾಂನ ಮೈ ಸನ್ ಪ್ರದೇಶದಲ್ಲಿ ಚಾಮ್ ದೇಗುಲ ಸಂಕೀರ್ಣಗಳನ್ನು ನಿರ್ಮಿಸಲಾಗಿದೆ.
ಈ ಶಿವಲಿಂಗ ಪತ್ತೆ ಎರಡೂ ದೇಶಗಳ ಪುರಾತನ ನಂಟನ್ನು ನೆನಪಿಸುವಂತೆ ಮಾಡಿದೆ. ಭಾರತದ ಅಭಿವೃದ್ಧಿ ಸಹಭಾಗಿತ್ವಕ್ಕೆ ಇದು ಉತ್ತಮ ಸಾಂಸ್ಕೃತಿಕ ಉದಾಹರಣೆ,' ಎಂದು ಎಸ್ ಜೈಶಂಕರ್ ಟ್ವೀಟ್ ನಲ್ಲಿ ಹೇಳಿದ್ದಾರೆ.