ವಾಷಿಂಗ್ಟನ್, ಮೇ 31 (Daijiworld News/MB) : ಸತತ ಪ್ರಯತ್ನದ ಬಳಿಕ ಅಮೆರಿಕದ ಖಾಸಗಿ ರಾಕೆಟ್ ಕಂಪನಿಯಾಗಿರುವ ಸ್ಪೇಸ್ ಎಕ್ಸ್ ಇಬ್ಬರು ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆ ಯಶಸ್ವಿಯಾಗಿದ್ದು ಇದೇ ಮೊದಲ ಬಾರಿಗೆ ಮಾನವ ಸಹಿತ ಗಗನಯಾನ ಕೈಗೊಂಡಿರುವ ಕಂಪೆನಿ ಸ್ಪೇಸ್ಎಕ್ಸ್ ಆಗಿದೆ.
ಇಬ್ಬರು ನಾಸಾ ಗಗನಯಾತ್ರಿಗಳನ್ನು ಹೊತ್ತ ಎಲಾನ್ ಮಸ್ಕ್ ಅವರ ಮಾಲೀಕತ್ವದ ಸ್ಪೇಸ್ಎಕ್ಸ್ ಫಾಲ್ಕಾನ್ 9 ರಾಕೆಟ್ ಸುಮಾರು ಒಂಬತ್ತು ವರ್ಷಗಳ ಬಳಿಕ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನ ಶನಿವಾರ ರಾತ್ರಿ 12.30- 1.00 ಗಂಟೆಗೆ ಉಡಾವಣೆಯಾಗಿದ್ದು ಯಶಸ್ವಿಯಾಗಿದೆ.
ನಾಸಾದ ವ್ಯಾವಹಾರಿಕ ಮಾನವ ಸಹಿತ ಗಗನಯಾನ ಯೋಜನೆ ಸ್ಪೇಸ್ ಎಕ್ಸ್ ಡೆಮೋ- 2 ಮಿಶನ್ ಆಗಿದ್ದು ರಾಬರ್ಟ್ ಬೆಹೆನ್ಕೆನ್ ಹಾಗೂ ಡೌಗ್ಲಾಸ್ ಹರ್ಲೀ ಎಂಬ ಇಬ್ಬರು ಗಗನ ಯಾತ್ರಿಗಳು ಇದರಲ್ಲಿ ಯಾನ ಮಾಡಿದ್ದಾರೆ.
ಬುಧವಾರವೇ ಈ ರಾಕೆಟ್ ಉಡಾವಣೆಯಾಗಬೇಕಿದ್ದು ಪ್ರತಿಕೂಲ ಹವಾಮಾನದಿಂದ ಮುಂದೂಡಿಕೆಯಾಗಿತ್ತು. 2011ರ ನಂತರ ಅಮೆರಿಕಾ ನೆಲದಿಂದ ಬಾಹ್ಯಾಕಾಶ ಯಾತ್ರೆ ಕೈಗೊಂಡಿರಲಿಲ್ಲ. 9 ವರ್ಷಗಳ ಬಳಿಕ ಇದು ಮೊದಲ ಯಾನವಾಗಿರುವ ಕಾರಣದಿಂದಾಗಿ ವಿಶ್ವದ ಗಮನ ಸೆಳೆದಿದೆ.