ವಾಷಿಂಗ್ಟನ್, ಜೂ 01 (Daijiworld News/MSP): ಕೊರೊನಾ ಅಟ್ಟಹಾಸದ ನಡುವೆ ಅಮೆರಿಕಾದಲ್ಲಿ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವು ಪ್ರಕರಣ ಶಾಂತಿ ಕದಡುವಂತೆ ಮಾಡಿದೆ. ಸಾವಿಗೆ ಕಾರಣವಾದ ಪೊಲೀಸರ ವಿರುದ್ಧ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಹಿಂಸಾಚಾರಕ್ಕೆ ತಿರುಗಿದೆ. ಭಾನುವಾರ ದೊಡ್ಡ ದೊಡ್ಡ ಮಳಿಗೆಗಳ ಲೂಟಿ, ಇದನ್ನು ತಡೆಯಲು ಬಂದವರ ಹತ್ಯೆಯಂತಹ ಘಟನೆಗಳು ನಡೆದಿದ್ದು, ಅಮೆರಿಕಾದ ಹಲವು ನಗರಗಳು ಇದರ ಪರಿಣಾಮ ಅಲ್ಲೋಲಕಲ್ಲೋಲವಾಗಿದೆ. ಮಿನ್ನಿಯಾಪೊಲೀಸ್ ನಗರದಲ್ಲಿ ಕರ್ಪ್ಯೂ ಜಾರಿಗೊಳಿಸಲಾಗಿದೆ.
ಪೊಲೀಸರು ಜನಾಂಗೀಯ ದ್ವೇಷವನ್ನು ಸಾಧಿಸಿದ್ದಾರೆ ಎಂದು ಆರೋಪಿಸಿ ಭಾರೀ ಸಂಖ್ಯೆಯ ಪ್ರತಿಭಟನಾಕಾರರು ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇವುಗಳ ವರದಿಗೆ ಹೋಗಿದ್ದ ಪತ್ರಕರ್ತರ ಮೇಲೂ ದಾಳಿ ನಡೆಸಲಾಗಿದೆ. ಇನ್ನು ಲಾಸ್ ಏಂಜಲೀಸ್ ನಲ್ಲಿ ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹಾರಿಸಿದ ರಬ್ಬರ್ ಗುಂಡು, ಖ್ಯಾತ ನಟ ಕೆಂಡ್ರಿಕ್ ಸ್ಯಾಂಪ್ಸನ್'ಗೆ ತಗುಲಿದ ಘಟನೆಯೂ ನಡೆದಿದೆ.
ವ್ಯಕ್ತಿಯ ವಿರುದ್ಧ ಕ್ರೌರ್ಯ ಮೆರೆದ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು ಬಂಧನಕ್ಕೆ ಒಳಪಡಿಸಲಾಗಿದೆ. ಅಲ್ಲದೆ ಘಟನೆ ನಡೆದಾಗ ಆತನ ಜೊತೆಯಲ್ಲಿದ್ದ ಇನ್ನೂ ನಾಲ್ವರು ಪೊಲೀಸರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ.
ಹಿಂಸಾಚಾರ ತಡೆಯಲು ಹಲವು ಪ್ರದೇಶಗಳಲ್ಲಿ ನ್ಯಾಷನಲ್ ಗಾರ್ಡ್ಸ್ ಗಳನ್ನು ನಿಯೋಜಿಸಲಾಗಿದೆ. ಈ ವರೆಗೆ ಹಿಂಸೆಯಲ್ಲಿ ತೊಡಗಿದ್ದ 1500ಕ್ಕೂ ಹೆಚ್ಚು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಈ ನಡುವೆ ಪ್ರತಿಭಟನಾಕಾರರು ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಇಲ್ಲದೆ ಸಾವಿರಾರು ಸಂಖ್ಯೆಯಲ್ಲಿ ಬೀದಿಗೆ ಬಂದಿರುವುದು ದೇಶದಲ್ಲಿ ಮತ್ತೊಂದು ಸುತ್ತಿನಲ್ಲಿ ಭಾರೀ ಪ್ರಮಾಣದಲ್ಲಿ ಕೊರೋನಾ ಸೋಂಕು ಹಬ್ಬುವ ಭೀತಿಗೂ ಕಾರಣವಾಗಿದೆ.