ವಾಷಿಂಗ್ಟನ್, ಜೂ. 02 (Daijiworld News/MB) : ದೇಶದಲ್ಲಿ ಕಾನೂನು ಕಾಪಾಡುವುದಾಗಿ ಪ್ರಮಾಣಿಕರಿಸಿದ್ದು ಅದನ್ನೇ ಪಾಲಿಸುತ್ತೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.
ಅಮೆರಿಕದಾದ್ಯಂತ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರ ಪ್ರಕರಣಗಳ ಕುರಿತಾಗಿ ಮಾತನಾಡಿದ ಅವರು, ಕಾನೂನು ಪಾಲಿಸುತ್ತೇನೆ ಎಂದು ಹೇಳಿದ್ದಾರೆ.
ಟ್ರಂಪ್ ದೇಶವನ್ನುದ್ಧೇಶಿಸಿ ಮಾತನಾಡುತ್ತಿದ್ದ ವೇಳೆ ಶ್ವೇತ ಭವನದ ಬಳಿ ರಕ್ಷಣಾ ಪಡೆಗಳು ಹಾಗೂ ಪ್ರತಿಭಟನಾ ನಿರತರ ನಡುವೆ ಘರ್ಷಣೆ ನಡೆದಿದ್ದು ಈ ಸಂದರ್ಭದಲ್ಲಿ ಟ್ರಂಪ್ ಅವರು, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಸಾವಿರಾರು ಸೈನಿಕರನ್ನು ನಿಯೋಜನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದು "ನನ್ನ ಅಮೆರಿಕನ್ನರೇ, ಇಲ್ಲಿನ ಅಧ್ಯಕ್ಷನಾಗಿರುವ ನನ್ನ ಮುಖ್ಯ ಕರ್ತವ್ಯ ನಮ್ಮ ದೇಶ ಹಾಗೂ ಅಮೇರಿಕನ್ನರ ರಕ್ಷಣೆ. ನಾನು ನಮ್ಮ ದೇಶದ ಕಾನೂನು ಕಾಪಾಡುವುದಾಗಿ ಪ್ರಮಾಣಿಕರಿಸಿದ್ದು ನಾನು ಅದನ್ನು ಮಾಡುತ್ತೇನೆ. ಫ್ಲಾಯ್ಡ್ ಕುಟುಂಬಕ್ಕೆ ನ್ಯಾಯ ಒದಗಿಸಲು ನಮ್ಮ ಆಡಳಿತ ಬದ್ಧ" ಎಂದು ಹೇಳಿದ್ದಾರೆ.
ಕಳೆದ 6 ದಿನಗಳಿಂದ ಆಫ್ರಿಕಾ ಮೂಲದ ಅಮೆರಿಕನ್ ಪ್ರಜೆ, ಜಾರ್ಜ್ ಫ್ಲಾಯ್ಡ್ ಅವರು ಪೊಲೀಸ್ ಕಸ್ಟಡಿಯಲ್ಲಿರುವಾಗ ಸಾವನ್ನಪ್ಪಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಯುತ್ತಿದ್ದು ಭಾನುವಾರ ತೀವ್ರವಾದ ಹೋರಾಟ ನಡೆದಿದ್ದು ಪೊಲೀಸರು 2500 ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.