ವುಹಾನ್, ಜೂ 03 (Daijiworld News/MSP): ಕೊರೊನಾ ವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಾ ಸೋಂಕಿಗೆ ಒಳಗಾಗಿ ಚರ್ಮದ ಬಣ್ಣವೇ ಬದಲಾಗಿದ್ದ ವುಹಾನ್ ನ ವೈದ್ಯ ಡಾ.ಹ್ಯು ವೀಫೆಂಗ್ (42) ಸೋಂಕಿನ ವಿರುದ್ದ ಐದು ತಿಂಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಕೊನೆಯುಸಿರೆಳೆದಿದ್ದಾರೆ.
ಚೀನಾದ ವುಹಾನ್ ನಗರದ ಆಸ್ಪತ್ರೆಯಲ್ಲಿ ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ ಎಂದು ಅಲ್ಲಿನ ಸ್ಥಳೀಯ ಪತ್ರಿಕೆಗಳು ವರದಿ ಮಾಡಿದೆ.
ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ಸಂದರ್ಭದಲ್ಲಿ ಜನವರಿಯಲ್ಲಿ ವೀಫೆಂಗ್ ಅವರಿಗೆ ಸೋಂಕು ತಗುಲಿತ್ತು. ಆ ಬಳಿಕ ಇವರ ಆರೋಗ್ಯ ಸ್ಥಿತಿ ತೀರಾ ಬಿಗಾಡಾಯಿಸುತ್ತಾ ಹೋಗಿದ್ದು ಸಂಕೀರ್ಣ ಆರೋಗ್ಯ ಸಮಸ್ಯೆಗಳಿಗೆ ತುತ್ತಾಗಿದ್ದರು. ಕಳೆದೊಂದು ತಿಂಗಳಿಂದ ಇವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.
ಯುರೋಲಜಿಸ್ಟ್ (ಮೂತ್ರಶಾಸ್ತ್ರಜ್ಞ) ಆಗಿದ್ದ ವೀಫೆಂಗ್, ವೈರಸ್ ಹರಡುವ ಆರಂಭದಲ್ಲೇ ಎಚ್ಚರಿಕೆ ನೀಡಿ ಚೀನಾ ಸರ್ಕಾರದ ದುರಾಡಳಿತದಿಂದ ಸೋಂಕಿಗೆ ಒಳಗಾಗಿ ಮೃತಪಟ್ಟಿದ್ದ ಡಾ. ಲಿ ವೆನ್ಲಿಯಾಂಗ್ ಅವರ ಸಹೋದ್ಯೋಗಿಯಾಗಿದ್ದರು. ಇಬ್ಬರು ವುಹಾನ್ ಕೇಂದ್ರೀಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ವೀಫೆಂಗ್ ಅವರ ಮತ್ತೊಬ್ಬ ಸಹೋದ್ಯೋಗಿ ಡಾ. ಯಿ ಫ್ಯಾನ್ ಅವರ ಚರ್ಮದ ಬಣ್ಣವು ಕಪ್ಪಾಗಿ ಬದಲಾಗಿದೆ. ಆದರೆ ಫ್ಯಾನ್ ಪೂರ್ತಿಯಾಗಿ ಗುಣಮುಖರಾಗಿದ್ದಾರೆ. ಇವರಿಬ್ಬರು ಒಂದೇ ಸಮಯದಲ್ಲಿ ಅನಾರೋಗ್ಯಕ್ಕೀಡಾಗಿದ್ದರು.