ಜಿನೀವಾ, ಜೂ 04 (DaijiworldNews/PY) : ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ವೈದ್ಯಕೀಯ ಪ್ರಯೋಗಗಳನ್ನು ಕೊರೊನಾ ವೈರಸ್ ಚಿಕಿತ್ಸೆಗೆ ಪ್ರಾರಂಭ ಮಾಡಲಾಗುವುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದೆ.
ಕೊರೊನಾ ರೋಗಿಗಳ ಸಾವಿನ ಸಂಖ್ಯೆ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯಿಂದ ಹೆಚ್ಚಾಗುವ ಸಾಧ್ಯತೆ ಇದೆ ಎಂದು ದಿ ಲ್ಯಾನ್ಸೆಟ್ ವೈದ್ಯಕೀಯ ಪತ್ರಿಕೆ ಪ್ರಕಟಿಸಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಈ ತೀರ್ಮಾನಕ್ಕೆ ಬಂದಿದೆ.
ಸಾಮಾನ್ಯವಾಗಿ ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಮಲೇರಿಯಾ ಜ್ವರಕ್ಕೆ ಚಿಕಿತ್ಸೆ ನೀಡಲು ಉಪಯೋಗ ಮಾಡಲಾಗುತ್ತದೆ. ಆದರೆ, ಅಮೆರಿಕ ಅಧ್ಯಕ್ಷ ಡೊಮಾಲ್ಡ್ ಟ್ರಂಪ್ ಸೇರಿದಂತೆ ಹಲವರು ಕೊರೊನಾ ಚಿಕಿತ್ಸೆಗಾಗಿ ಬಳಸಲು ಶಿಫಾರಸು ಮಾಡಿ ಭಾರತದಿಂದ ತರಿಸಿಕೊಂಡಿದ್ದರು. ಈ ಔಷಧಿಯ ಬಳಕೆಯನ್ನು ಹಲವು ದೇಶಗಳ ಸರ್ಕಾರಗಳು ಬೆಂಬಲಿಸಿವೆ.
ಕಳೆದ ತಿಂಗಳು 25ರಂದು ವಿಶ್ವ ಆರೋಗ್ಯ ಸಂಸ್ಥೆಯು, ಸುರಕ್ಷತಾ ಪರಾಮರ್ಶೆಯನ್ನು ನಡೆಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಮೇಲೆ ಪ್ರಾಯೋಗಿಕ ಪರೀಕ್ಷೆಯನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗುವುದು ಎಂದು ಹೇಳಿತ್ತು. ಇದೀಗ ತನ್ನ ಅಭಿಪ್ರಾಯ ಹಾಗೂ ತೀರ್ಮಾನಗಳನ್ನು ಬದಲಾವಣೆ ಮಾಡಿದ್ದು, ಪ್ರಯೋಗಗಳನ್ನು ಬದಲಾವಣೆ ಮಾಡುವುದರಲ್ಲಿ ಯಾವುದೇ ಕಾರಣಗಳಿಲ್ಲ ಎಂದು ತಿಳಿಸಿದೆ.
ಹೈಡ್ರಾಕ್ಸಿಕ್ಲೋರೋಕ್ವಿನ್ ಬಳಕೆ ಹೆಚ್ಚಾಗಿ ಮಾಡುವುದಕ್ಕೆ ಕಳೆದ ವಾರ ಸಾಲಿಡಾರಿಟಿ ಟ್ರಯಲ್ನ ಕಾರ್ಯನಿರ್ವಾಹಕ ಗುಂಪು ತಡೆ ತಂದಿದ್ದು, ಔಷಧದ ಸುರಕ್ಷತೆಯ ವಿಚಾರವಾಗಿ ಕಳವಳ ವ್ಯಕ್ತಪಡಿಸಿತ್ತು ಎಂದು ಸುದ್ದಿ ಸಂಸ್ಥೆಗೆ ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನಮ್ ಘೆಬ್ರೆಯೆಸಸ್ ತಿಳಿಸಿದ್ದಾರೆ.