ಇಸ್ಲಾಮಾಬಾದ್, ಜೂ 04 (Daijiworld News/MSP): ಸಾಕಿದ ಗಿಳಿ ಹಾರಿ ಹೋಯಿತೆಂದು, ಅಕ್ರಮವಾಗಿ ಮನೆಕೆಲಸದವಳಾನ್ನಾಗಿ ಮಾಡಿಕೊಂಡಿದ್ದ 8ರ ಹರೆಯದ ಬಾಲೆಯನ್ನು ದಂಪತಿಗಳು ಹೊಡೆದು ಕೊಂದ ಅಮಾನುಷ ಘಟನೆ ಇಸ್ಲಾಮಾಬಾದ್ನಲ್ಲಿ ನಡೆದಿದೆ.
ಬಾಲಕಿ ಝೋಹರಾಳಿಗೆ ಶಿಕ್ಷಣ ಕೊಡಿಸುವ ಭರವಸೆ ನೀಡಿ, ರಾವಲ್ಪಿಂಡಿಯ ಬೇಗಮ್ ಅಖ್ತರ್ ರುಕ್ಸಾನಾ ದಂಪತಿ ಆಕೆಯನ್ನು ತಮ್ಮ ಮನೆಯಲ್ಲಿರುವ ಮಗುವನ್ನು ನೋಡಿಕೊಳ್ಳಲೆಂದು ಮನೆಗೆ ಕರೆತಂದಿದ್ದರು. ಆದರೆ ಬಳಿಕ ಬಾಲಕಿಯನ್ನು ಮನೆಕೆಲಸದಲ್ಲಿಡಗಿಸಿಕೊಂಡಿದ್ದರು. ಪ್ರಾಣಿಗಳನ್ನು ಖರೀದಿಸುವ ಮತ್ತು ಮಾರಾಟ ಮಾಡುವ ವ್ಯವಹಾರವನ್ನು ನಡೆಸುತ್ತಿರುವ ಬೇಗಮ್ ಅಖ್ತರ್ ರುಕ್ಸಾನಾ ದಂಪತಿ ಆಕೆಗೆ ಗಿಳಿಗೂಡು ಸ್ವಚ್ಚಗೊಳಿಸಿ ಆಹಾರ ಹಾಕುವಂತೆ ತಿಳಿಸಿದ್ದಾರೆ. ಬುಧವಾರ ಇದೇ ಕೆಲಸದಲ್ಲಿ ಬಾಲಕಿ ತೊಡಗಿದ್ದಾಗ ಅಕಸ್ಮಾತ್ ಆಗಿ ಗಿಳಿ ಹಾರಿ ಹೋಗಿದೆ.
ಗಿಳಿ ಹಾರಿ ಹೋದ ವಿಚಾರ ತಿಳಿದು ಆಕ್ರೋಶಗೊಂಡ ದಂಪತಿ 8ರ ಬಾಲೆ ಝೋಹರಾಳನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡುವಂತೆ ನಟಿಸಿದ್ದಾರೆ. ಆದರೆ ಅದಾಗಲೇ ಬಾಲಕಿಯ ಜೀವನ್ಮರಣದ ಜೊತೆ ಹೋರಾಡುತ್ತಿದ್ದಳು. ಇನ್ನು ಮೈ ಮೇಲೆ ಆಕೆಗಾಗಿರುವ ಗಾಯಗಳನ್ನು ನೋಡಿದ ವೈದ್ಯರೇ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಆಕೆಯ ಮುಖ, ಕೈಗಳು, ಪಕ್ಕೆಲುಬು ಮತ್ತು ಕಾಲುಗಳ ಕೆಳಗೆ ಗಾಯಗಳಾಗಿ ಸಂಪೂರ್ಣ ದೇಹವೇ ರಕ್ತಮಯವಾಗಿತ್ತು.
ಅಷ್ಟೇ ಅಲ್ಲದೇ ತೊಡೆಯ ಸಮೀಪವೂ ಸಾಕಷ್ಟು ಗಾಯದ ಗುರುತುಗಳಿದ್ದು, ಆಕೆಯ ಮೇಲೆ ಲೈಂಗಿಕ ದೌರ್ಜನ್ಯವೂ ನಡೆದಿರುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
" ದಂಪತಿ ಬಂಧಿಸಿ ವಿಚಾರಣೆಗೊಳಪಡಿಸಿದಾಗ ಬಾಲಕಿಗೆ ಥಳಿಸಿದ್ದಾಗಿ ದಂಪತಿ ಒಪ್ಪಿಕೊಂಡಿದ್ದು ಜೂ.6ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಲಾಗಿದೆ. ವಿಧಿವಿಜ್ಞಾನ ಪರೀಕ್ಷೆಯ ವರದಿಗಾಗಿ ನಾವು ಕಾಯುತ್ತಿದ್ದೇವೆ " ಎಂದು ರಾವಲ್ಪಿಂಡಿ ಪೊಲೀಸ್ ಅಧೀಕ್ಷಕ ಜಿಯಾ ಉದ್ದೀನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.