ಬೀಜಿಂಗ್,ಜೂ 04 (Daijiworld News/MSP): ಪ್ರಾಥಮಿಕ ಶಾಲಾ ಮಕ್ಕಳ ಮೇಲೆ ಅದೇ ಶಾಲೆಯ ಸೆಕ್ಯೂರಿಟಿ ಗಾರ್ಡ್ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ 40 ವಿದ್ಯಾರ್ಥಿಗಳು ಮತ್ತು ಶಿಕ್ಷಕಿ ಗಾಯಗೊಂಡಿರುವ ಘಟನೆ ಚೀನಾದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಈ ಕೃತ್ಯದ ಸಂಬಂಧ ಅದೇ ಶಾಲೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಲಿ ಕ್ಸಿಯಾಮಿನ್(೫೦ ) ಚಾಕುವಿನಿಂದ ಹಲ್ಲೆ ನಡೆಸಿದ ಆರೋಪಿಯಾಗಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡಿರುವ 40 ಮಕ್ಕಳಲ್ಲಿ ಮೂವರ ಸ್ಥಿತಿ ಶೋಚನೀಯವಾಗಿದ್ದು, ಚಿಕಿತ್ಸೆ ಮುಂದುವರಿಸಲಾಗಿದೆ
ಚೀನಾದ ದಕ್ಷಿಣ ಭಾಗದಲ್ಲಿರುವ ಗಾಂಗ್ಸಿಔಂಗ್ ಪ್ರಾಂತ್ಯದ ವೋಝೋನ್ ನಗರದ ವಾಂಗ್ಫು ಪಟ್ಟಣದ ಸೆಂಟ್ರಲ್ ಪ್ರೈಮರಿ ಸ್ಕೂಲ್ನಲ್ಲಿಂದು ಬೆಳಗ್ಗೆ 8.30ರಲ್ಲಿ ಶಾಲಾ ಮಕ್ಕಳು ಸಾಮೂಹಿಕ ಪ್ರಾರ್ಥನೆ ಮುಗಿಸಿ ಶಾಲಾ ಕೊಠಡಿಗಳಿಗೆ ತೆರಳುತ್ತಿದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ಚಾಕುವಿನಿಂದ ಏಕಾಏಕಿ ಮಕ್ಕಳ ಮೇಲೆ ಶಿಕ್ಷಕರ ಮೇಲೆ ಹಾಗೂ ಶಾಲಾ ಇತರ ಸಿಬ್ಬಂದಿಗೆ ಮನ ಬಂದಂತೆ ಎರಗಿದ್ದಾನೆ.
ಇದರಿಂದ ಇಡೀ ಶಾಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಸುದ್ದಿ ತಿಳಿದು ಪೋಷಕರು, ಪೊಲೀಸರು ಗಾಯಗೊಂಡ ಪುಟ್ಟ ಪುಟ್ಟ ಮಕ್ಕಳನ್ನು ಎತ್ತಿಕೊಂಡು ಆಸ್ಪತ್ರೆಗೆ ಹೋಗುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.