ಜಿನೀವಾ, ಜೂ 11 (DaijiworldNews/PY) : ಲಾಕ್ಡೌನ್ ಅನ್ನು ಕಳೆದ ತಿಂಗಳು ತೆರವುಗೊಳಿಸಿದ ಕಾರಣದಿಂದ ಪಾಕಿಸ್ತಾನದಲ್ಲಿ ಕೊರೊನಾ ಪ್ರಕರಣ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದ್ದು, ಈ ಹಿನ್ನೆಲೆ ಕೊರೊನಾ ಸೋಂಕು ಹರಡುತ್ತಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನದ ಅಧಿಕಾರಿಗಳು ಕಟ್ಟುನಿಟ್ಟಾದ ಲಾಕ್ಡೌನ್ ಅನ್ನು ಪುನಃ ಹೇರಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಸಾಂದರ್ಭಿಕ ಚಿತ್ರ
ಲಾಕ್ಡೌನ್ ಅನ್ನು ತೆರವುಗೊಳಿಸಲು ಪಾಕಿಸ್ತಾನ ಸಂಸ್ಥೆಯ ಆರು ತಾಂತ್ರಿಕ ಮಾನದಂಡಗಳಲ್ಲಿ ಯಾವುದನ್ನೂ ಕೂಡಾ ಪೂರೈಸಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪಾಕಿಸ್ತಾನ ಮುಖ್ಯಸ್ಥ ಪಲಿತಾ ಮಹಿಪಾಲ ಅವರು ಸರ್ಕಾರಕ್ಕೆ ಭಾನುವಾರ ಕಳುಹಿಸಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಈ ಮೊದಲು ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ಸರ್ಕಾರವು ವಿವಿಧ ಪ್ರಾಂತ್ಯಗಳಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ವಿಧಿಸಿತ್ತು. ಆದರೆ, ಈದ್ ಹಬ್ಬದ ಮುನ್ನ, ಮೇ ತಿಂಗಳ ಅಂತ್ಯದಲ್ಲಿ ಹೆಚ್ಚಿನ ನಿರ್ಬಂಧಗಳನ್ನು ತೆಗೆದಿತ್ತು.
ಪ್ರಸ್ತುತ ಪಾಕಿಸ್ತಾನದಲ್ಲಿ 1,13,702 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇಲ್ಲಿಯವರೆಗೆ ಸುಮಾರು 2,312 ಮಂದಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನ ಸರ್ಕಾರ ವರದಿ ನೀಡಿದೆ.