ಬರ್ಲಿನ್, ಜೂ 14 (DaijiworldNews/PY) : ಸೆಪ್ಟೆಂಬರ್ ಒಳಗಾಗಿ ಜರ್ಮನಿಯಲ್ಲಿರುವ ಅಮೆರಿಕದ ಸೇನಾಪಡೆಯ ಸಿಬ್ಬಂದಿ ಸಂಖ್ಯೆಯನ್ನು 25 ಸಾವಿರಕ್ಕೆ ಕಡಿತಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚಿಂತನೆ ನಡೆಸಿದ್ದಾರೆ.
ಜರ್ಮನಿ ಅಥವಾ ನ್ಯಾಟೊ ಸದಸ್ಯ ರಾಷ್ಟ್ರಗಳೊಂದಿಗೆ ಅಮೆರಿಕ ಈ ತೀರ್ಮಾನದ ಬಗ್ಗೆ ಚರ್ಚೆ ನಡೆಸಿಲ್ಲ ಹಾಗೂ ಅಧಿಕೃತವಾಗಿ ಕಾಂಗ್ರೆಸ್ಗೂ ಮಾಹಿತಿಯನ್ನು ತಿಳಿಸಿಲ್ಲ. ಇದರಿಂದಾಗಿ ಈ ಚಿಂತನೆಯನ್ನು ಪುನರ್ಪರಿಶೀಲನೆ ಮಾಡಲು ಹೌಸ್ ಆರ್ಮ್ಡ್ ಸರ್ವೀಸ್ ಸಮಿತಿಯಲ್ಲಿರುವ ರಿಪಬ್ಲಿಕನ್ ಪಕ್ಷದ 22 ಸದಸ್ಯರು ಟ್ರಂಪ್ ಅವರಿಗೆ ಪತ್ರ ಬರೆದಿದ್ದಾರೆ.
ರಷ್ಯಾದಿಂದಿರುವ ಅಪಾಯ ಕಡಿಮೆ ಆಗಿಲ್ಲ. ನ್ಯಾಟೊ ಮೇಲಿರುವ ಅಮೆರಿಕದ ಬದ್ಧತೆಯು ಈ ನಡೆಯಿಂದ ದುರ್ಬಲವಾಗಲಿದ್ದು, ರಷ್ಯಾದ ಮೇಲಿನ ಅಪ್ರಚೋದಿತ ಆಕ್ರಮಣಕ್ಕೆ ಎಡಮಾಡಿಕೊಡಲಿದೆ ಎಂಬುದಾಗಿ ಪತ್ರದಲ್ಲಿ ಟೆಕ್ಸಾಸ್ನ ಮ್ಯಾಕ್ ಥಾರ್ನ್ಬೆರಿ ಉಲ್ಲೇಖಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ಗೆ ಮಾಡುತ್ತಿರುವ ಮತ್ತೊಂದು ಸಹಾಯ ಇದು ಎಂದು ಸೆನೆಟರ್ ಜ್ಯಾಕ್ ರೀಡ್ ಟೀಕೆ ಮಾಡಿದ್ದಾರೆ.
ಕಳೆದೊಂದು ವರ್ಷದಿಂದ ಅಮೆರಿಕವು, ರಕ್ಷಣಾ ವಲಯಕ್ಕೆ ಹೆಚ್ಚಿನ ಅನುದಾನ ನೀಡದೇ ಹೋದಲ್ಲಿ ಸೇನಾಪಡೆಗಳನ್ನು ಪುನಃ ಕರೆಸಿಕೊಳ್ಳುವ ಎಚ್ಚರಿಕೆಯನ್ನು ನೀಡುತ್ತಿತ್ತು. ಸದ್ಯ ಜರ್ಮನಿಯಲ್ಲಿ 34,500 ಸೇನಾ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.