ವೆಲ್ಲಿಂಗ್ಟನ್ , ಜೂ.16 (DaijiworldNews/MB) : ಕೊರೊನಾ ಮುಕ್ತವಾಗಿ ವಿಶ್ವದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದ್ದ ನ್ಯೂಜಿಲ್ಯಾಂಡ್ನಲ್ಲಿ ಮತ್ತೆ ಇಬ್ಬರಿಗೆ ಕೊರೊನಾ ಸೋಂಕು ಪಾಸಿಟಿವ್ ಆಗಿದ್ದು ಇವರಿಬ್ಬರು ಬ್ರಿಟನ್ನಿಂದ ಬಂದಿರುವವರು ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ವಿದೇಶದಲ್ಲಿರುವ ನ್ಯೂಜಿಲ್ಯಾಂಡ್ ಮೂಲದವರರಿಗೆ ಮಾತ್ರ ದೇಶಕ್ಕೆ ವಾಪಾಸ್ ಬರಲು ಅವಕಾಶವಿದ್ದು ವ್ಯಾಪಾರ ಮತ್ತು ಇನ್ನಿತರ ತುರ್ತು ಸಂದರ್ಭಗಳಿದ್ದರೆ ಮಾತ್ರ ಇತರರ ಪ್ರವೇಶಕ್ಕೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ಬಂದವರಿಗೆ ಎರಡು ವಾರ ಕ್ವಾರಂಟೈನ್ ಕಡ್ಡಾಯವಾಗಿದೆ.
ಎಲ್ಲಾ ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾದ ಹಿನ್ನಲೆಯಲ್ಲಿ ನ್ಯೂಜಿಲ್ಯಾಂಡ್ನ್ನು ಕೊರೊನಾ ಮುಕ್ತ ಎಂದು ಘೋಷಿಸಲಾಗಿತ್ತು.
5 ದಶಲಕ್ಷ ಜನಸಂಖ್ಯೆ ಹೊಂದಿರುವ ನ್ಯೂಜಿಲ್ಯಾಂಡ್ನಲ್ಲಿ ಈ ಹೊಸ ಎರಡು ಪ್ರಕರಣಗಳು ಸೇರಿದಂತೆ ಒಟ್ಟು 1,156 ಕೊರೊನಾ ಪ್ರಕರಣಗಳು ದಾಖಲಾಗಿದ್ದು ಈ ಪೈಕಿ 22 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. 1,132 ಮಂದಿ ಗುಣಮುಖರಾಗಿದ್ದಾರೆ.