ಬೇಜಿಂಗ್, ಜೂ.17 (DaijiworldNews/MB) : ಚೀನಾದಲ್ಲಿ ಮತ್ತೆ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗುತ್ತಿದ್ದು ಬೀಜಿಂಗ್ನಲ್ಲೇ ಸೋಂಕು ದೃಢವಾಗುತ್ತಿದೆ. ಬುಧವಾರ 31 ಹೊಸ ಪ್ರಕರಣಗಳು ವರದಿ ಆಗಿದ್ದು ಕಳೆದ 5 ದಿನಗಳಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ.
ಸೋಂಕು ಮತ್ತೆ ಉಲ್ಭಣಗೊಂಡ ಕಾರಣದಿಂದ ಈಗಾಗಲೇ ಚೀನಾ ರಾಜಧಾನಿ ಬೇಜಿಂಗ್ನಲ್ಲಿ ಸಾಮೂಹಿಕ ಸೋಂಕು ಪರೀಕ್ಷೆ ಆರಂಭಿಸಿದ್ದು ಶಾಲೆಗಳನ್ನು ಮುಚ್ಚಲು ತೀರ್ಮಾನ ಮಾಡಿದ್ದಾರೆ. ಪ್ರಯಾಣಕ್ಕೆ ನಿರ್ಬಂಧ ವಿಧಿಸಿದ್ದು, ಶಾಲೆಗಳು ಮುಚ್ಚಿರುವ ಕಾರಣ ಆನ್ಲೈನ್ ತರಗತಿಗಳು ಮುಂದುವರಿಯಲಿವೆ. ಕೆಲವು ತಜ್ಞರು ಚೀನಾದಲ್ಲಿ ಕೊರೊನಾದ ಎರಡನೇ ಅಲೆ ಆರಂಭವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಚೀನಾದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 83,265 ಕ್ಕೆ ಏರಿಕೆಯಾಗಿದ್ದು 78,379 ಗುಣಮುಖರಾದರೆ 4,634 ಮಂದಿ ಕೊರೊನಾದಿಂದ ಸಾವನ್ನಪ್ಪಿದ್ದಾರೆ.
ವಿಶ್ವದಲ್ಲೇ ಅಧಿಕ ಕೊರೊನಾ ಪ್ರಕರಣಗಳು ದೃಢಪಟ್ಟಿರುವ ಅಮೆರಿಕದಲ್ಲಿ 22,08,400 ಮಂದಿಗೆ ಸೋಂಕು ತಗುಲಿದ್ದು 1,19,132 ಮಂದಿ ಸಾವನ್ನಪ್ಪಿದ್ದಾರೆ. 9,03,041 ಮಂದಿ ಗುಣಮುಖರಾಗಿದ್ದಾರೆ.
ಜಗತ್ತಿನಾದ್ಯಂತ 81,55,266 ಮಂದಿಯಲ್ಲಿ ಸೋಂಕು ದೃಢಪಟ್ಟಿದ್ದು 4.41 ಲಕ್ಷ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.