ವಾಷಿಂಗ್ಟನ್, ಜೂ 17 (Daijiworld News/MSP): ಜಾರ್ಜ್ ಫ್ಲಾಯ್ಡ್ ಹತ್ಯೆಯ ನಂತರ ಅಮೇರಿಕಾದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗಳ ಬಳಿಕ ಅಮೆರಿಕ ಪೊಲೀಸ್ ವ್ಯವಸ್ಥೆಯನ್ನು ಕಾಲಕ್ಕೆ ತಕ್ಕಂತೆ ಬಲಪಡಿಸಬೇಕಾದ, ಸುಧಾರಣೆ ಮಾಡಬೇಕಾದ ಅಗತ್ಯವಿದೆ ಎಂದು ಟ್ರಂಪ್ ಹೇಳಿದ್ದು ಇದೀಗ ಪೊಲೀಸ್ ವ್ಯವಸ್ಥೆ ಸುಧಾರಣೆ ಕುರಿತ ಕಾರ್ಯಕಾರಿ ಆದೇಶಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸಹಿ ಹಾಕಿದ್ದಾರೆ. ಆದರೆ ತೀವ್ರ ಚರ್ಚೆಗೆಕಾರಣವಾದ ವರ್ಣಭೇದ ಹಾಗೂ ಜನಾಂಗೀಯ ದ್ವೇಷ ಕುರಿತಂತೆ ಯಾವುದೇ ಪ್ರಸ್ತಾಪವನ್ನೂ ಒಳಗೊಂಡಿಲ್ಲದಿದ್ದರೂ, ಚೋಕ್ಹೋಲ್ಸ್ಡ್ ನಿಷೇಧ ಹೇರುವ ಮಹತ್ವದ ಪ್ರಸ್ತಾಪವನ್ನು ಆದೇಶ ಒಳಗೊಂಡಿದೆ.
ಆಫ್ರಿಕನ್ ನಿವಾಸಿ ಜಾರ್ಜ್ ಫ್ಲಾಯ್ಡ್ ಅವರನ್ನು ಪೊಲೀಸರು ಹತ್ಯೆಗೈದ ಕಾರಣ ರಾಷ್ಟ್ರವ್ಯಾಪಿ ಪ್ರತಿಭಟನೆ ಹಾಗೂ ರಾಜಕೀಯ ಒತ್ತಡ ಉಂಟಾದ ಕಾರಣ ಶೀಘ್ರದಲ್ಲೇ ಹೊಸ ಕಾನೂನು ಜಾರಿ, ಸುಧಾರಣೆಗಳನ್ನು ತರಬೇಕಿದೆ ಎಂದು ಟೆಕ್ಸಾಸ್ ರಾಜ್ಯದಲ್ಲಿ ನಡೆದ ದುಂಡುಮೇಜಿನ ಸಭೆಯಲ್ಲಿ ಇತ್ತೀಚೆಗೆ ತಿಳಿಸಿದ್ದರು.
ಪೊಲೀಸರಿಗೆ ಉತ್ತಮ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಕಾರ್ಯಕ್ರಮಗಳನ್ನು ಆಯೋಜಿಸಲು ಇಲಾಖೆಗೆ ಆರ್ಥಿಕ ನೆರವು ,ಹಾಗೂ ಅಧಿಕಾರವನ್ನು ಅಗತ್ಯಕ್ಕಿಂತ ಹೆಚ್ಚಾಗಿ ಪ್ರಯೋಗಿಸುವ ಪೊಲೀಸ್ ಅಧಿಕಾರಿಗಳ ಮೇಲೆ ನಿಗಾ ಇರಿಸುವ ಹಾಗೂ ಅವರ ಅಪರಾಧ ಕೃತ್ಯಗಳ ದಾಖಲೆ ಸಂಗ್ರಹಿಸುವ ಡೇಟಾಬೇಸ್ ನಿರ್ಮಾಣವಾಗಲಿದೆ ಎಂದು ಕಾರ್ಯಕಾರಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ.ಇದಲ್ಲದೆ ಈ ಹೊಸ ಆದೇಶದಲ್ಲಿ ಪೊಲೀಸ್ ಅಧಿಕಾರಿಗಳ ಅಪರಾಧ ಚರಿತ್ರೆಯನ್ನುಸಾರ್ವಜನಿಕರು ತಿಳಿದುಕೊಳ್ಳಬಹುದಾಗಿದೆ.