ದುಬೈ, ಜೂ. 24 (DaijiworldNews/MB) : ಭಾರತೀಯ ಮೂಲದ ಉದ್ಯಮಿ ವಾಸವಿದ್ದ ವಿಲ್ಲಾಗೆ ನುಗ್ಗಿ ದರೋಡೆ ಮಾಡಿದ ಪಾಕಿಸ್ತಾನ ಪ್ರಜೆಯೊಬ್ಬ ಭಾರತೀಯ ಮೂಲದ ಉದ್ಯಮಿ ಹಾಗೂ ಅವರ ಪತ್ನಿಯನ್ನು ಅಮಾನುಷವಾಗಿ ಹತ್ಯೆ ಮಾಡಿರುವ ಘಟನೆ ಅರೇಬಿಯನ್ ರಾಂಚಸ್ ಪ್ರದೇಶದಲ್ಲಿ ನಡೆದಿದ್ದು ಪೊಲೀಸರು ಘಟನೆ ನಡೆದ ೨೪ ಗಂಟೆಯೊಳಗೆ ಆರೋಪಿಯನ್ನು ಬಂಧಿಸಿದ್ದಾರೆ.
ಹತ್ಯೆಗೀಡಾದವರನ್ನು 40 ವರ್ಷದ ಹಿರೇನ್ ಆದಿತ್ಯ ಹಾಗೂ ಪತ್ನಿ ವಿಧಿ ಆದಿತ್ಯ ಎಂದು ಗುರುತಿಸಲಾಗಿದೆ.
ಜೂನ್ 18ರಂದು ಈ ದಂಪತಿಯು ಮಲಗಿದ್ದ ಸಂದರ್ಭದಲ್ಲಿ ಈ ವ್ಯಕ್ತಿಯು ಎರಡು ಮಹಡಿಯ ವಿಲ್ಲಾವನ್ನು ಪ್ರವೇಶಿಸಿದ್ದು 2 ಸಾವಿರ ದಿರ್ಹಾಮ್ಸ್ (41,229 ರೂ.)ಇದ್ದ ಪರ್ಸ್ ಕದ್ದು ಬಳಿಕ ಬೆಡ್ರೂಮ್ನಲ್ಲಿಯೂ ಹಣ ದೋಚಲು ನುಗ್ಗಿದ್ದಾನೆ. ಈ ಸಂದರ್ಭದಲ್ಲಿ ಕೋಣೆಯಲ್ಲಿ ಮಲಗಿದ್ದ ಈ ದಂಪತಿ ಎಚ್ಚರಗೊಂಡಿದ್ದನ್ನು ನೋಡಿದ ಈತ ಅವರಿಗೆ ಚೂರಿ ಇರಿದು ಹತ್ಯೆ ಮಾಡಿದ್ದು ಇದನ್ನು ನೋಡಿದ ಈ ದಂಪತಿಯ ಪುತ್ರಿಗೂ ಚೂರಿಯಿಂದ ಇರಿದು ಅಲ್ಲಿಂದ ಪರಾರಿಯಾಗಿದ್ದಾನೆ. ಈ ದಂಪತಿಯ ಇನ್ನೊರ್ವ ಪುತ್ರಿಯು ಈ ಬಗ್ಗೆ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಇನ್ನು ಚೂರಿಯು ಘಟನೆ ನಡೆದ ಸ್ಥಳದಿಂದ ಒಂದು ಕಿಲೋಮೀಟರ್ ದೂರದಲ್ಲಿ ಸಿಕ್ಕಿದ್ದು ಆರೋಪಿ ಪಕ್ಕದ ಪ್ರದೇಶದವನು ಎಂದು ತಿಳಿದು ಬಂದಿದೆ. ಈತನ ಮೇಲೆ ಶಂಕೆ ವ್ಯಕ್ತಪಡಿಸಿದ ಪೊಲೀಸರು ವಿಚಾರಣೆ ನಡೆಸಿದಾಗ ತಾನು ಅವರ ಮನೆಯಲ್ಲಿ ಒಂದು ವರ್ಷದಿಂದ ಕೆಲಸ ಮಾಡುತ್ತಿದ್ದೆ. ಮೇಜಿನ ಮೇಲೆ ಹಣ ಇರುವುದನ್ನು ನೋಡಿದ್ದೆ. ಹಾಗಾಗಿ ಹಣ ದೋಚಲು ಯತ್ನಿಸಿದೆ ಎಂದು ಹೇಳಿದ್ದಾನೆ ಎಂದು ಅಪರಾಧ ವಿಭಾಗದ ಉಪ ನಿರ್ದೇಶಕ ಕರ್ನಲ್ ಅದಿಲ್ ಅಲ್ ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಕಾನ್ಸುಲ್ ಜನರಲ್ ವಿಪುಲ್ ಅವರು, ಮೃತರ ಸ್ನೇಹಿತರು ಹಾಗೂ ಸಂಬಂಧಿಕರ ಜೊತೆ ಸಂಪರ್ಕದಲ್ಲಿದ್ಧೇವೆ. ಮನೆಯಿಂದ ಅಪಹರಣ ಮಾಡಿದ್ದ ಕೆಲವು ಆಭರಣವನ್ನು ವಶಕ್ಕೆ ಪಡೆದಿದ್ಧೇವೆ ಎಂದು ಹೇಳಿದ್ದಾರೆ.