ಇಸ್ಲಾಮಾಬಾದ್, ಜೂ. 25 (DaijiworldNews/MB) : ಭಾರತವು ತನ್ನ ಗಡಿ ವಿವಾದವನ್ನು ಚೀನಾದಿಂದ ಪಾಕಿಸ್ತಾನದ ಕಡೆಗೆ ತಿರುಗಿಸಲು ಭಾರತ ದಾಳಿ ಸಂಚು ಹೂಡಿದೆ ಎಂದು ಅಲ್ಲಿನ ವಿದೇಶಾಂಗ ಇಲಾಖೆ ಸಚಿವ ಮಹಮ್ಮೂದ್ ಖುರೇಶಿ ಆರೋಪಿಸಿದ್ದಾರೆ.
ಈ ಬಗ್ಗೆ ಪಾಕ್ನ ಮಾಧ್ಯದೊಂದಿಗೆ ಮಾತನಾಡಿದ ಅವರು, ಭಾರತ ಸರ್ಕಾರವು ವಿರೋಧ ಪಕ್ಷಗಳ ಗಮನವನ್ನು ಬೇರೆಡೆಗೆ ಸೆಳೆಯಲು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಸಂಚು ಮಾಡಿದೆ. ಭಾರತ ಸರ್ಕಾರದ ಮನಸ್ಥಿತಿ ಎಲ್ಲರಿಗೂ ತಿಳಿದಿದೆ. ಪಾಕಿಸ್ತಾನ ವಿರುದ್ಧ ಸುಳ್ಳು ಧ್ವಜ ಕಾರ್ಯಾಚರಣೆ ನಡೆಸಲು ಭಾರತ ನೆಪ ಹುಡುಕುತ್ತಿದೆ. ಸರ್ಕಾರವನ್ನು ವಿರೋಧ ಪಕ್ಷ ಪ್ರಶ್ನಿಸುತ್ತಿದ್ದು ಇದಕ್ಕೆ 20 ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ವಿಪಕ್ಷ ಕೇಳುತ್ತಿರುವ ಪ್ರಶ್ನೆಯೇ ಸಾಕ್ಷಿ ಎಂದು ದೂರಿದ್ದಾರೆ.
ಭಾರತ- ಚೀನಾ ಗಡಿಯಲ್ಲಿ ಭಾರತದ ಯೋಧರು ಹುತಾತ್ಮರಾದ ಹಿನ್ನಲೆಯಲ್ಲಿ ಮೋದಿ ಸರ್ಕಾರ ವಿರೋಧ ಪಕ್ಷಗಳ ಟೀಕೆ ಹಾಗೂ ಪ್ರಶ್ನೆಗಳನ್ನು ಎದುರಿಸುತ್ತಿದೆ. ಇದನ್ನು ಮರೆಮಾಚಲು ಪಾಕಿಸ್ತಾನದ ಮೇಲೆ ದಾಳಿ ನಡೆಸಲು ಮುಂದಾದರೆ ಅದನ್ನು ಎದುರಿಸಲು ನಾವು ಸಜ್ಜಾಗಿದ್ದೇವೆ ಎಂದು ಹೇಳಿದ್ದಾರೆ.
ಭಾರತದಲ್ಲಿ ಪಾಕ್ ಸಿಬ್ಬಂದಿಗಳಿಗೆ ಕಿರುಕುಳ ನೀಡಲಾಗುತ್ತಿದೆ. ಅವರನ್ನು ಹಿಂಬಾಳಿಸಲಾಗುತ್ತಿದೆ. ದೆಹಲಿಯಲ್ಲಿರುವ ಪಾಕಿಸ್ತಾನ ರಾಯಭಾರಿಗಳು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಯಾವುದೇ ಆಧಾರವಿಲ್ಲದೆಯೇ ಆರೋಪ ಮಾಡಿದ್ದಾರೆ ಎಂದಿದ್ದಾರೆ.