ವಾಷಿಂಗ್ಟನ್, ಜೂ. 26 (DaijiworldNews/MB) : ಚೀನಾವನ್ನು ಎದುರಿಸಲು ಜಾಗತಿಕ ಪಡೆಗಳ ನಿಯೋಜನೆಯ ಮರುಪರಿಶೀಲನೆ ಮಾಡುತ್ತೇವೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ತಿಳಿಸಿದ ಅವರು, ಚೀನಾವು ಭಾರತ, ಮಲೇಷ್ಯಾ, ಇಂಡೊನೇಷ್ಯಾ, ಫಿಲಿಪ್ಪೀನ್ಸ್ನಂತಹ ಏಷ್ಯಾದ ದೇಶಗಳಿಗೆ ಬೆದರಿಕೆ ಹಾಕುತ್ತಿದ್ದು ಯಾವುದೇ ಸಂದರ್ಭದಲ್ಲೂ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯನ್ನು (ಪಿಎಲ್ಎ) ಎದುರಿಸಲು ನಾವು ಸಿದ್ಧರಾಗಿರುವ ಬಗ್ಗೆ ಪರಿಶೀಲಿಸುತ್ತೇವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆಯಂತೆ ಸೇನಾ ಮರುನಿಯೋಜನೆಯ ಪರಿಶೀಲನೆ ನಡೆಸಲಾಗುತ್ತಿದೆ. ಆ ನಿಟ್ಟಿನಲ್ಲಿ ಜರ್ಮನಿಯಲ್ಲಿರುವ ನಮ್ಮ ಸೈನಿಕರ ಸಂಖ್ಯೆಯನ್ನು 52 ಸಾವಿರದಿಂದ 25 ಸಾವಿರಕ್ಕೆ ಇಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದ್ದಾರೆ.
ಚೀನಾ ಏಷ್ಯಾದ ದೇಶಗಳಿಗೆ ಹಾಕುತ್ತಿರುವ ಬೆದರಿಕೆಯನ್ನು ಎದುರಿಸಲು ಆ ರಾಷ್ಟ್ರಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಈ ಮೊದಲು ಮಾಡಿರದ ರೀತಿಯಲ್ಲಿ ತಯಾರಿ ನಡೆಸಬೇಕು. ಆ ಕಾರಣದಿಂದ ನಮ್ಮೆಲ್ಲಾ ಮಿತ್ರ ರಾಷ್ಟ್ರಗಳು, ಮುಖ್ಯವಾಗಿ ಐರೋಪ್ಯ ರಾಷ್ಟ್ರಗಳ ಒಪ್ಪಿಗೆ ಪಡೆದೇ ಮುಂದಿನ ಹೆಜ್ಜೆಗಳನ್ನು ಇಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಜರ್ಮನಿಯಲ್ಲಿರುವ ಅಮೆರಿಕದ ಸೇನೆಯನ್ನು ಕಡಿತಗೊಳಿಸುವ ಟ್ರಂಪ್ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು ಇದರಿಂದಾಗಿ ಐರೋಪ್ಯ ರಾಷ್ಟ್ರಗಳ ಮೇಲೆ ರಷ್ಯಾದಿಂದ ಅಪಾಯ ಉಂಟಾಗಬಹುದು ಎಂದು ಹೇಳಲಾಗಿದೆ.