ಇಸ್ಲಾಮಾಬಾದ್, ಜೂ. 26 (DaijiworldNews/MB) : ಭಯೋತ್ಪಾದಕ ಒಸಾಮ ಬಿನ್ ಲಾಡೆನ್ನನ್ನು ಹುತಾತ್ಮ (ಶಹೀದ್) ಎಂದ ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನದಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಈ ಕುರಿತು ಸಂಸತ್ ಅಧಿವೇಶನದಲ್ಲಿ ವಿರೋಧ ವ್ಯಕ್ತಪಡಿಸಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ನ(ಎನ್) ಹಿರಿಯ ನಾಯಕ ಖ್ವಾಜಾ ಆಸಿಫ್, ''ನಮ್ಮ ದೇಶಕ್ಕೆ ಭಯೋತ್ಪಾದನೆ ತಂದವನು ಒಸಾಮ ಬಿನ್ ಲಾಡೆನ್. ಆ ಭಯೋತ್ಮಾದಕನನ್ನು ಪ್ರಧಾನಿ ಶಹೀದ್ ಎಂದು ಕರೆಯುವುದೇ?'' ಎಂದು ಪ್ರಶ್ನಿಸಿದ್ದಾರೆ ಎಂದು ಅಲ್ಲಿನ ಪತ್ರಿಕೆ ವರದಿ ತಿಳಿಸಿದೆ.
ಇನ್ನು ಈ ಬಗ್ಗೆ ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿರುವ ಪಾಕಿಸ್ತಾನದ ಹೋರಾಟಗಾರ್ತಿ ಮೀನಾ ಗಬೀನಾ, ''ಲಾಡೆನ್ನಂತಹ ಭಯೋತ್ಪಾದಕರು ನಾಶ ಪಡಿಸಿರುವ ಮುಸ್ಲಿಮರ ಘನತೆ ಹಾಗೂ ಮೌಲ್ಯವನ್ನು ಪುನಃ ಪಡೆದುಕೊಳ್ಳಲು ವಿಶ್ವದ ಮುಸ್ಲಿಮರು ಪ್ರಯತ್ನಿಸುತ್ತಿದ್ದಾರೆ. ಭಯೋತ್ಪಾದನೆಯಿಂದಾಗಿ ವಿಶ್ವದಾದ್ಯಂತ ಮುಸ್ಲಿಮರು ತಾರತಮ್ಯ ಎದುರಿಸುತ್ತಿದ್ದು ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ, ಒಸಾಮ ಬಿನ್ ಲಾಡೆನ್ನನ್ನು ಹುತಾತ್ಮ ಎನ್ನುವ ಮೂಲಕ ಇನ್ನಷ್ಟು ಸಮಸ್ಯೆಗೆ ಕಾರಣರಾಗಿದ್ದಾರೆ'' ಎಂದು ಹೇಳಿದ್ದಾರೆ.
ಗುರುವಾರ ಸಂಸತ್ ಅಧಿವೇಶನದಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್ ಅವರು, ''ಅಮೆರಿಕ ಸೇನೆ ನಮಗೆ ತಿಳಿಯದಂತೆ ಅಬೊಟಾಬಾದ್ಗೆ ಬಂದು ಒಸಾಮ ಬಿನ್ ಲಾಡೆನ್ ಅವರನ್ನು ಹತ್ಯೆ ಮಾಡಿತ್ತು. ಲಾಡೆನ್ ಹುತಾತ್ಮರಾದರು. ನಾವು ಆಗ ಜಾಗತಿಕವಾಗಿ ಅಪಮಾನಕ್ಕೆ ಒಳಗಾದೆವು'' ಎಂದು ಹೇಳಿದ್ದರು. ಭಯೋತ್ಪಾದಕ ಲಾಡೆನ್ನನ್ನು ಹುತಾತ್ಮರಾದರು ಎಂದು ಹೇಳಿದ ಕಾರಣದಿಂದಾಗಿ ತೀವ್ರ ವಿರೋಧ ವ್ಯಕ್ತವಾಗಿದೆ.
ಏತನ್ಮಧ್ಯೆ ಈ ಬಗ್ಗೆ ಟ್ವೀಟ್ ಮಾಡಿರುವ ಇಮ್ರಾನ್ಖಾನ್ ಅವರ ರಾಜಕೀಯ ಸಂವಹನ ವಿಶೇಷ ಸಹಾಯಕ ಡಾ. ಶಾಬಾಜ್ ಗಿಲ್, ''ಪ್ರಧಾನಿಯವರು ಮಾತನಾಡುವಾಗ ಎರಡು ಬಾರಿ ಹತ್ಯೆಯಾದ ಎಂಬ ಪದವನ್ನು ಬಳಸಿದ್ದಾರೆ. ಆದರೆ ಅನಗತ್ಯವಾಗಿ ಅವರ ಮಾತಿನ ಬಗ್ಗೆ ವಿಶ್ವದಾದ್ಯಂತ ಚರ್ಚೆ ನಡೆಯುತ್ತಿದೆ'' ಎಂದು ಸಮರ್ಥಿಸಿಕೊಂಡಿದ್ದಾರೆ.