ಕಠ್ಮಂಡು, ಜೂ 29 (Daijiworld News/MSP): ಹೊಸ ನಕ್ಷೆಯನ್ನು ಬಿಡುಗಡೆ ಮಾಡಿದ ಬಳಿಕ ನಮ್ಮ ಸರಕಾರವನ್ನು ಪತನಗೊಳಿಸಲು ಹಾಗೂ ನನ್ನನ್ನು ಪ್ರಧಾನ ಮಂತ್ರಿ ಹುದ್ದೆಯಿಂದ ಕೆಳಗಿಳಿಸಲು ದೊಡ್ಡ ಪ್ರಮಾಣದಲ್ಲಿ ಭಾರತ ಸಂಚು ನಡೆಸುತ್ತಿದೆ ಎಂದು ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಒಲಿ ಆರೋಪಿಸಿದ್ದಾರೆ.
ಐಷಾರಾಮಿ ಹೊಟೇಲ್ಗಳಲ್ಲಿ ಕುಳಿತುಕೊಂಡು ಭಾರತದ ವತಿಯಿಂದ ಸರಕಾರ ಪತನಗೊಳಿಸಲು ಯತ್ನ ಮಾಡಲಾಗುತ್ತಿದೆ. ಇಂಥ ಯತ್ನಕ್ಕೆ ಯಶಸ್ಸು ಸಿಗಲು ಸಾಧ್ಯವಿಲ್ಲ. ಇದರಲ್ಲಿ ಆ ದೇಶದ ರಾಯಭಾರಿ ಕಚೇರಿಯವರು ಕೂಡಾ ಭಾಗಿಯಾಗಿದ್ದಾರೆ ಎಂದು ಪರೋಕ್ಷವಾಗಿ ಭಾರತದ ವಿರುದ್ಧ ಆರೋಪಿಸಿದ್ದಾರೆ.
ಭಾರತದ ಭೂಭಾಗಗಳಾದ ಲಿಪುಲೆಕ್, ಕಲಾಪಾನಿ ಮತ್ತು ಲಿಂಪಿಯಾಧುರ ಪ್ರದೇಶಗಳು ನೇಪಾಳದ ಭೂ ಪ್ರದೇಶಗಳು ಎಂದು ನಕ್ಷೆಯಲ್ಲಿ ಸೇರಿಸಿ ಸಂಸತ್ತಿನಲ್ಲಿ ಅನುಮೋದಿಸಿದ ಬಳಿಕ ಸರಕಾರದಲ್ಲಿಯೇ ಅಪಸ್ವರಗಳು ಕೇಳಲಾರಂಭಿಸಿದ್ದವು. ಇದೇ ಹಿನ್ನಲೆಯಲ್ಲಿ ಭಾರತ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದೆ ಆದರೆ ಎಂದೂ ನೆರೆರಾಷ್ಟ್ರದ ತಂತ್ರ ಸಫಲವಾಗುವುದಿಲ್ಲಎಂದು ಭಾರತದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿದ್ದಾರೆ.