ವಿಶ್ವಸಂಸ್ಥೆ,ಜೂ 30 (Daijiworld News/MSP): " ಕೊರೊನಾದಿಂದ ಮುಕ್ತಿ ಯಾವತ್ತು ?" ಎಂದು ಇಡೀ ಜಗತ್ತೇ ಕಾಯುತ್ತಿರುವಾಗ, ವಿಶ್ವ ಆರೋಗ್ಯ ಸಂಸ್ಥೆ ವಿಶ್ವವನ್ನೇ ಎಚ್ಚರಿಸಿದ್ದು, "ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಮುಕ್ತಾಯದ ಹಂತ ತಲುಪಿಲ್ಲ. ಇದಕ್ಕಿಂತಲೂ ಭೀಕರತೆ ಇನ್ನಷ್ಟೇ ಬರಬೇಕಿದೆ" ಎಂದಿದೆ.
ಈ ಕುರಿತು ಮಾತನಾಡಿದ ಡಬ್ಲ್ಯುಎಚ್ಒ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, "ಕೊರೋನಾ ವೈರಸ್ ಕೊನೆಗೊಂಡಿಲ್ಲ, ಇನ್ನಷ್ಟೇ ಗಂಭೀರ ಹಂತ ತಲುಪಲಿದೆ ಎಂದು ಹೇಳಲು ನನಗೆ ವಿಷಾದವಿದೆ. ನಾವು ಈಗಾಗಲೇ ಬಹಳಷ್ಟು ಕಳೆದುಕೊಂಡಿದ್ದೇವೆ. ಆದರೆ ನಿರೀಕ್ಷೆಯನ್ನಲ್ಲ. ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಮುಂದೆ ಬರಲಿದೆ ಎಂದು ಹೇಳಿರುವುದಕ್ಕೆ ಕ್ಷಮೆ ಇರಲಿ" ಎಂದಿದ್ದಾರೆ.
" ಈಗಾಗಲೇ ಸೊಂಕೀನಿಂದ ಸಾವಿಗೀಡಾದವರ ಸಂಖ್ಯೆ 5 ಲಕ್ಷದ ಗಡಿ ಮೀರಿದೆ. 6 ತಿಂಗಳ ಹಿಂದೆ ನಾವ್ಯಾರು ನಾವು ವಾಸಿಸುವ ಈ ಜಗತ್ತು ಕೊರೊನಾ ಎಂಬ ಹೊಸ ವೈರಸ್ ನಿಂದ ಸಂಕಷ್ಟಕ್ಕೀಡಾಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಇದೆಲ್ಲ ಮುಕ್ತಾಯಗೊಂಡು ವಾಸ್ತವ ಸ್ಥಿತಿಗೆ ಮರಳುವ ದಿನ ಇನ್ನೂ ಬಹಳಷ್ಟು ದೂರವಿದೆ.
ಕೆಲವು ದೇಶಗಳು ಈಗಾಗಲೆ ಆರ್ಥಿಕತೆ ಮತ್ತು ಸಮಾಜಗಳನ್ನು ಮತ್ತೆ ತೆರೆದಿದೆ. ಇದರಿಂದ ಕೊರೋನಾ ವೈರಸ್ ಪ್ರಕ್ರಣಗಳು ಹೆಚ್ಚಲಿದೆ. ನಾವೆಲ್ಲರೂ ಮುಂದುವರಿಯಲು ಬಯಸುತ್ತೇವೆ. ಆದರೆ ಕಠಿಣ ವಾಸ್ತವವೆಂದರೆ ಕೊರೊನಾ ಮುಗಿಯುವ ಹಂತದ ಹತ್ತಿರದಲ್ಲೂ ಇಲ್ಲ. ಅನೇಕ ದೇಶಗಳು ಸ್ವಲ್ಪ ಪ್ರಗತಿ ಸಾಧಿಸಿದ್ದೇವೆ ನಿಜ ಆದರೆ ಕೊರೋನಾ ಗಂಭೀರ ಹಂತಕ್ಕೆ ತಲುಪಲಿದೆ ಎಂದು ಅವರು ಹೇಳಿದ್ದಾರೆ.