ವಾಷಿಂಗ್ಟನ್, ಜು. 01 (DaijiworldNews/MB) : ವಿಶ್ವದಲ್ಲೇ ಅಧಿಕ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿರುವ ಅಮೆರಿಕದಲ್ಲಿ ಒಂದು ದಿನದಲ್ಲೇ 47 ಸಾವಿರ ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು ಏತನ್ಮಧ್ಯೆ ತಜ್ಞರೊಬ್ಬರು ಅಮೆರಿಕದಲ್ಲಿ ಈಗ ದಾಖಲಾಗಿರುವ ಸೋಂಕಿಗಿಂತ ಎರಡು ಪಟ್ಟು ಅಧಿಕ ಸೋಂಕು ದಾಖಲಾಗಲಿದೆ. ಈಗಾಗಲೇ ಪರಿಸ್ಥಿತಿ ಕೈ ಮೀರಿದೆ ಎಂದು ತಿಳಿಸಿದ್ದಾರೆ.
ಸರ್ಕಾರದ ಉನ್ನತ ಮಟ್ಟದ ತಜ್ಞರೊಬ್ಬರು ಈ ಮಾಹಿತಿಯನ್ನು ನೀಡಿದ್ದು ಕೊರೊನಾಗೆ ಎರಡು ಪಟ್ಟು ಅಧಿಕ ಮಂದಿ ಬಲಿಯಾಗುವ ಕಾಲ ಬಹಳ ದೂರದಲ್ಲಿ ಇಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಸಾಂಕ್ರಮಿಕ ರೋಗಗಳ ತಜ್ಞ ಡಾ. ಆಂಥೋನಿ ಫೌಸಿ, ಈಗಾಗಲೇ ಪರಿಸ್ಥಿತಿ ಕೈ ಮೀರಿದೆ. ಕೊರೊನಾ ಸೋಂಕು ಪ್ರಕರಣಗಳು ಹೀಗಿಯೇ ಹೆಚ್ಚುತ್ತಾ ಹೋದಲ್ಲಿ ಮುಂದೆ ಒಂದು ದಿನದಲ್ಲೇ ಒಂದು ಲಕ್ಷ ಕೊರೊನಾ ಪ್ರಕರಣಗಳು ಪತ್ತೆಯಾಗಬಹುದು. ದೇಶಕ್ಕೆ ಅಪಾಯ ಎದುರಾಗಿದೆ ಎಂದು ತಿಳಿಸಿದ್ದಾರೆ.
ಅಮೆರಿಕದಲ್ಲಿ ಕೊರೊನಾಗೆ ಈಗಾಗಲೇ 27 ಲಕ್ಷಕ್ಕಿಂತ ಅಧಿಕ ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು 1.30 ಲಕ್ಷಕ್ಕೂ ಅಧಿಕ ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಅಮೆರಿಕಾದಲ್ಲಿ ಈವರೆಗ ನ್ಯೂಯಾರ್ಕ್ನಲ್ಲೇ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು ಈಗ ಕ್ಯಾಲಿಫೋರ್ನಿಯಾ, ಟೆಕ್ಷಾಸ್, ಆರಿಜೋನಾಗಳಲ್ಲೂ ಕೊರೊನಾ ವ್ಯಾಪಿಸಿದೆ. ಈ ನಡುವೆ ಅಮೆರಿಕದಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಬೆಡ್ ಹಾಗೂ ಆಸ್ಪತ್ರೆಗಳ ಕೊರತೆಯೂ ಎದುರಾಗಿದೆ.