ಕಠ್ಮಂಡು, ಜು. 01 (DaijiworldNews/MB) : ಭಾರತದ ವಿರುದ್ಧವಾಗಿ ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ ಮಾಡಿದ ಆರೋಪನ್ನು ಅಲ್ಲಿನ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ನಾಯಕರೇ ತೀವ್ರವಾಗಿ ವಿರೋಧಿಸಿದ್ದು ಪ್ರಧಾನಿ ಕೆಪಿ ಶರ್ಮಾ ಒಲಿ ತನ್ನ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಭಾರತದ ಭೂ ಭಾಗವನ್ನು ಸೇರಿಸಿ ನೇಪಾಳ ತನ್ನ ಹೊಸ ನಕ್ಷೆಯನ್ನು ಮಾಡಿದ್ದು ಇದಕ್ಕೆ ಹಲವು ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಬಳಿಕ ಕೆಪಿ ಶರ್ಮಾ ನನ್ನ ಪ್ರಧಾನಿ ಸ್ಥಾನವನ್ನು ಉರುಳಿಸಲು ತನ್ನ ಪಕ್ಷದ ನಾಯಕರು ಹಾಗೂ ಭಾರತ ಷಡ್ಯಂತ್ರ ಮಾಡಿದ್ದಾರೆ ಎಂದು ಆರೋಪಿಸಿದ್ದರು.
ಇದೀಗ ಈ ಹೇಳಿಕೆಗೆ ಸ್ವ ಪಕ್ಷದಿಂದಲೇ ತೀವ್ರ ವಿರೋಧ ವ್ಯಕ್ತವಾಗಿದ್ದು, ರಾಜಕೀಯವಾಗಿ ಹಾಗೂ ರಾಜತಾಂತ್ರಿಕವಾಗಿ ಪ್ರಧಾನಿ ಹೇಳಿಕೆ ಸರಿಯಲ್ಲ. ಈ ರೀತಿಯ ಹೇಳಿಕೆಯಿಂದ ನೆರೆ ದೇಶದೊಂದಿಗಿನ ಸಂಬಂಧ ಹಾಳಾಗುತ್ತದೆ ಎಂದು ನೇಪಾಳದ ಮಾಜಿ ಪ್ರಧಾನಿ ಪುಷ್ಪಕಮಲ್ ದಹಲ್ ಎಂದಿದ್ದಾರೆ.
ಇನ್ನು ಪಕ್ಷದ ಹಿರಿಯ ಮುಖಂಡರಾದ ಮಾಧವ್ ಕುಮಾರ್ ನೇಪಾಳ್, ಝಲನಾಥ್ ಖನಾಲ್, ಪಕ್ಷದ ಉಪಾಧ್ಯಕ್ಷ ಬಮ್ದೇವ್ ಗೌತಮ್ ಹಾಗೂ ಮುಖಂಡ ನಾರಾಯಣ್ಕಾಜಿ ಶ್ರೇಷ್ಠ ಅವರು, ತಮ್ಮ ಹೇಳಿಕೆಯನ್ನು ಪ್ರಧಾನಿ ಒಲಿ ಸಾಬೀತು ಪಡಿಸಲಿ ಅಥವಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.