ಇಸ್ಲಾಮಾಬಾದ್, ಜು. 02 (DaijiworldNews/MB) : ಜಾಗತಿಕವಾಗಿ ಹಲವು ದುರಂತಗಳಿಗೆ ಕಾರಣವಾಗಿರುವ ಪಬ್ಜಿ ಆನ್ಲೈನ್ ಗೇಮ್ನ್ನು ಈಗಾಗಲೇ ಕೆಲವು ದೇಶಗಳು ನಿರ್ಬಂಧಿಸಿದ್ದು ಇದೀಗ ಪಾಕಿಸ್ತಾನ ಕೂಡಾ ಪಬ್ಜಿ ಗೇಮ್ಗೆ ನಿರ್ಬಂಧ ಹೇರಿದೆ.
ಈ ಆಟ ಆಡಿದ ಮಕ್ಕಳಲ್ಲಿ ದ್ವೇಷ, ಕ್ರೌರ್ಯ ಹಾಗೂ ಖಿನ್ನತೆ ಹೆಚ್ಚಾಗಿರುವ ಬಗ್ಗೆ ಹಲವು ದೂರುಗಳು ದಾಖಲಾಗಿದೆ. ಹಾಗೆಯೇ ಗೇಮ್ ಆಡುತ್ತಿದ್ದಂತೆ ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಕೂಡಾ ದಾಖಲಾಗಿದೆ. ಈ ನಿಟ್ಟಿನಲ್ಲಿ ಪಾಕ್ನಲ್ಲಿ ತಾತ್ಕಾಲಿಕವಾಗಿ ಪಬ್ಜಿ ಗೇಮ್ ನಿರ್ಬಂಧಿಸಲಾಗಿದೆ. ಈ ಬಗ್ಗೆ ಹೈಕೋರ್ಟ್ನಲ್ಲಿ ಜುಲೈ 9ರಂದು ವಿಚಾರಣೆ ನಿಗದಿಯಾಗಿದೆ ಎಂದು ಅಲ್ಲಿನ ಪತ್ರಿಕೆಗಳು ವರದಿ ಮಾಡಿದೆ.
ಇನ್ನು ಈ ಗೇಮ್ನಿಂದ ಹಲವು ಆತ್ಮಹತ್ಯೆಗಳು ಹಾಗೂ ಮಕ್ಕಳು ಖಿನ್ನತೆಗೆ ಒಳಗಾಗಿರುವ ಕಾರಣದಿಂದಾಗಿ ಈಗಾಗಲೇ ಜೋರ್ಡನ್, ಇರಾಕ್, ನೇಪಾಳ, ಇಂಡೊನೇಷ್ಯಾದ ಕೆಲವು ಪ್ರಾಂತ್ಯ ಹಾಗೂ ಭಾರತದ ಗುಜರಾತ್ನಲ್ಲಿ ಪಬ್ಜಿ ನಿಷೇಧಿಸಲಾಗಿದೆ.
ಏತನ್ಮಧ್ಯೆ ಕೊರಿಯಾ, ಭಾರತ, ಚೀನಾ, ಅಮೆರಿಕ ಸೇರಿದಂತೆ ಹಲವು ದೇಶಗಳಲ್ಲಿ ಪಬ್ಜಿ ಟೂರ್ನಿ ನಡೆಯುತ್ತಿದ್ದು ಇದಕ್ಕಾಗಿಯೇ ಹಲವು ತಂಡಗಳು ಪ್ರತಿದಿನ 12–15 ತಾಸು ಅಧ್ಯಯನ ಮಾಡುತ್ತಿದೆ ಎಂದು ವರದಿ ತಿಳಿಸಿದೆ.