ವಿಶ್ವಸಂಸ್ಥೆ, ಜು. 04 (DaijiworldNews/MB) : ವಿಶ್ವದಾದ್ಯಂತ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿರುವ ಕೊರೊನಾ ಸೋಂಕಿಗೆ ಲಸಿಕೆಯನ್ನು ಅಭಿವೃದ್ಧಿ ಕಾರ್ಯ ನಡೆಯುತ್ತಲ್ಲೇ ಇದೆ. ಏತನ್ಮಧ್ಯೆ ಇನ್ನೆರಡು ವಾರದಲ್ಲಿ ಈ ಸೋಂಕಿನ ಮಾನವ ಪ್ರಯೋಗದ ಫಲಿತಾಂಶ ದೊರೆಯಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಕುರಿತಾಗಿ ಮಾಹಿತಿ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯಸ್ಥ ಡಾ.ಟೆಡ್ರೋಸ್ ಅಧನೋಮ್ ಅವರು, ವಿಶ್ವದಾದ್ಯಂತ ಐದು ಸಾವಿರಕ್ಕೂ ಹೆಚ್ಚು ಕೊರೊನಾ ಸೋಂಕಿತರ ಮೇಲೆ ಈ ಲಸಿಕೆಯ ಪ್ರಯೋಗ ಮಾಡಲಾಗಿದೆ. ಪ್ರಪಂಚದ 39 ದೇಶಗಳ ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವ ಈ ಲಸಿಕೆಯ ಪ್ರಯೋಗದ ಫಲಿತಾಂಶವು ಇನ್ನು ಎರಡು ವಾರಗಳಲ್ಲಿ ದೊರೆಯಲಿದೆ ಎಂದು ತಿಳಿಸಿದ್ದಾರೆ.
ಈ ಮೊದಲು ವಿಶ್ವ ಸಂಸ್ಥೆ ರೆಮ್ಡೆಸಿವಿರ್, ಹೈಡ್ರಾಕ್ಸಿಕ್ಲೋರೋಕ್ವಿನ್, ಲೋಪಿನಾವಿರ್ ಅಥವಾ ರಿಟೊನವಿರ್ಗಳನ್ನು ಕೊರೊನಾ ಸೋಂಕಿತರ ಚಿಕಿತ್ಸೆಗೆ ಬಳಸುವಂತೆ ತಿಳಿಸಿದ್ದು ಈ ಪೈಕಿ ಹೈಡ್ರಾಕ್ಸಿಕ್ಲೋರೋಕ್ವಿನ್ನಿಂದ ಉತ್ತಮ ಫಲಿತಾಂಶ ದೊರೆಯದ ಹಿನ್ನಲೆ ಹಲವು ದೇಶಗಳನ್ನು ಈ ಔಷಧಿಯನ್ನು ಬಳಸುತ್ತಿಲ್ಲ.
ಇನ್ನು ಭಾರತದಲ್ಲಿ ಕೊರೊನಾಗೆ ಮೊದಲ ಲಸಿಕೆ 'ಕೊವಾಕ್ಸಿನ್ 'ನ ಮೊದಲ ಹಾಗೂ ಎರಡನೇ ಹಂತದ ಮಾನವ ಪ್ರಯೋಗವು ದೇಶದ 12 ಸಂಸ್ಥೆಗಳಲ್ಲಿ ಶೀಘ್ರವೇ ಆರಂಭವಾಗಲಿದೆ.