ಮಾಸ್ಕೋ, ಜು.13 (DaijiworldNews/MB) : ವಿಶ್ವದಾದ್ಯಂತ ಜನರನ್ನು ಸಂಕಷ್ಟಕ್ಕೆ ದೂಡಿರುವ ಮಹಾಮಾರಿ ಕೊರೊನಾಗೆ ಈಗ ರಷ್ಯಾದಲ್ಲಿ ಲಸಿಕೆಯನ್ನು ಅಭಿವೃದ್ಧಿ ಪಡಿಸಿದ್ದು ಇದರ ಮಾನವ ಪ್ರಯೋಗವೂ ಕೂಡಾ ಯಶಸ್ವಿಯಾಗಿದೆ. ಈ ಮೂಲಕ ಕೊರೊನಾ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗಳನ್ನು ಯಶಸ್ವಿಯಾಗಿ ಸಂಪೂರ್ಣಗೊಳಿಸಿದ ಮೊದಲ ರಾಷ್ಟ್ರವಾಗಿ ಹೊರಹೊಮ್ಮಿದೆ ಎಂದು ರಷ್ಯಾ ಮಾಧ್ಯಮಗಳು ವರದಿ ಮಾಡಿದೆ.ಇದೀಗ ರಷ್ಯಾದ ಕೊರೊನಾ ಲಸಿಕೆಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ಈ ಬಗ್ಗೆ ರಷ್ಯಾದ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ರಷ್ಯಾದ ಸೆಚೆನೊವ್ ವಿಶ್ವವಿದ್ಯಾಲಯದ ಔಷಧಿಗಳ ಕೇಂದ್ರ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಮುಖ್ಯ ಸಂಶೋಧಕಿ ಎಲೆನಾ ಸ್ಮೊಲ್ಯಾರ್ಚುಕ್, ''ಲಸಿಕೆಯ ಮಾನವ ಪ್ರಯೋಗವು ಮುಗಿದಿದ್ದು ಲಸಿಕೆ ಸುರಕ್ಷಿತವಾಗಿದೆ. ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ. ಜುಲೈ 15 ಮತ್ತು ಜುಲೈ 20 ರಂದು ಸ್ವಯಂಸೇವಕರನ್ನು ಬಿಡುಗಡೆ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.
ಇನ್ನು ಈ ಲಸಿಕೆಯನ್ನು ವಾಣಿಜ್ಯ ಉತ್ಪಾದನೆಗೆ ಯಾವಾಗ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿಲ್ಲ.
ರಷ್ಯಾವು ಗಮಲೇಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಕೊರೊನಾ ಲಸಿಕೆಯ ಎರಡು ರೀತಿಯ ಕ್ಲಿನಿಕಲ್ ಪ್ರಯೋಗಗಳಿಗೆ ಜೂನ್ 18 ರಂದು ಅನುಮತಿ ನೀಡಿದ್ದು ಮೊದಲ ಪ್ರಯೋಗವನ್ನು ಬರ್ಡೆಂಕೊ ಮಿಲಿಟರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಇನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಓ) ಪ್ರಕಾರವಾಗಿ ಪ್ರಸ್ತುತ ಕನಿಷ್ಠ 21 ಲಸಿಕೆಗಳು ಪ್ರಮುಖ ಪ್ರಯೋಗಗಳಲ್ಲಿವೆ.