ಕಠ್ಮಂಡು, ಜು.14 (DaijiworldNews/MB) : ನೇಪಾಳ ಭಾರತದ ಭೂಭಾಗವನ್ನು ತನ್ನ ನಕ್ಷೆಗೆ ಸೇರಿಸಿ ಭಾರೀ ವಿವಾದ ಸೃಷ್ಟಿಸಿದ ಬೆನ್ನಲ್ಲೇ ಇದೀಗ ಶ್ರೀರಾಮನ ಜನ್ಮ ಭೂಮಿ ಅಯೋಧ್ಯೆ ಇರುವುದು ನೇಪಾಳದಲ್ಲಿ, ರಾಮ ನೇಪಾಳಿ ಎಂದು ನೇಪಾಳದ ಪ್ರಧಾನಿ ಕೆ.ಪಿ ಶರ್ಮ ಒಲಿ ಹೇಳಿದ್ದಾರೆ.
ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡಿದ ಶರ್ಮ ಒಲಿ, ''ಭಾರತ ರಾಮ ಹುಟ್ಟಿದ್ದು ಭಾರತದಲ್ಲಿ ಎಂದು ಹೇಳುತ್ತಿದ್ದ ಕಾರಣದಿಂದ ನಾವು ಕೂಡಾ ಸೀತಾದೇವಿ ಭಾರತದ ರಾಜಕುಮಾರ ರಾಮನನ್ನು ವಿವಾಹವಾಗಿದ್ದರು ಎಂದು ನಂಬಿದ್ದೆವು. ಆದರೆ ಭಾರತ ನಕಲಿ ಅಯೋಧ್ಯೆಯನ್ನು ಸೃಷ್ಟಿ ಮಾಡಿ ಸಾಂಸ್ಕೃತಿಕವಾಗಿ ಅತಿಕ್ರಮಣ ಮಾಡುತ್ತಿದೆ. ನಿಜವಾಗಿ ಅಯೋಧ್ಯೆ ಇರುವುದು ಬಿರ್ಗುಂಜ್ನ ಪಶ್ಚಿಮ ಭಾಗದಲ್ಲಿರುನ ಥೋರಿ ನಗರದಲ್ಲಿ'' ಎಂದು ಹೇಳಿಕೊಂಡಿದ್ದಾರೆ.
''ನೇಪಾಳದಲ್ಲಿ ವಾಲ್ಮೀಕಿ ಆಶ್ರಮ ಇದ್ದು ರಿಧಿಯಲ್ಲಿ ರಾಜ ದಶರಥ ಪುತ್ರನನ್ನು ಪಡೆಯಲು ಧಾರ್ಮಿಕ ವಿಧಿಗಳನ್ನು ನೆರವೇರಿಸಿದ್ದರು. ದಶರಥನ ಪುತ್ರ ರಾಮ. ಹಾಗಾಗಿ ರಾಮ ಭಾರತೀಯನಲ್ಲ ನೇಪಾಳಿ'' ಎಂದು ಹೇಳಿದ ಅವರು ''ಯಾವುದೇ ಸಂಪರ್ಕ ಇಲ್ಲದಿರುವಾಗ ಸೀತೆಯನ್ನು ವಿವಾಹವಾಗಲು ರಾಮ ಜನಕಪುರ್ಗೆ ಹೇಗೆ ಬಂದ? ಈಗ ಭಾರತದಲ್ಲಿ ಹೇಳಿಕೊಳ್ಳಲಾಗುತ್ತಿರುವ ಅಯೋಧ್ಯೆಯಿಂದ ರಾಮ ಜನಕ್ಪುರ್ಗೆ ಬರುವುದು ಸಾಧ್ಯವಿಲ್ಲ. ಮೊಬೈಲ್, ಟೆಲೆಫೋನ್ ಇಲ್ಲದ ಕಾಲದಲ್ಲಿ ವಿವಾಹದ ಮಾತುಕತೆ ಹೇಗೆ ನಡೆಯಿತು. ರಾಮನಿಗೆ ಜನಕ್ಪುರ್ ಬಗ್ಗೆ ಹೇಗೆ ತಿಳಿಯಿತು'' ಎಂಬ ಪ್ರಶ್ನೆಗಳನ್ನು ಕೇಳಿದ್ದಾರೆ.
ನೇಪಾಳವು ಈಗಾಗಲೇ ಲಿಪುಲೇಶ್, ಕಾಲಾಪಾನಿ ಮತ್ತು ಲಿಂಪಿಯಾಧುರಾ ಎಂಬ ಭಾರತಕ್ಕೆ ಸೇರಿದ ಪ್ರದೇಶವನ್ನು ತಮ್ಮ ಭೂಪಟದಲ್ಲಿ ಸೇರಿಸಿದ್ದು ಆ ನಕ್ಷೆಗೆ ನೇಪಾಳದ ಸಚಿವ ಸಂಪುಟ ಅನುಮೋದನೆ ನೀಡಿದೆ.