ಲಂಡನ್, ಜು 16 (DaijiworldNews/PY): ಕೊರೊನಾ ವೈರಸ್ಗೆ ಸಿದ್ದಪಡಿಸುತ್ತಿರುವ ಸಂಭಾವ್ಯ ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತು ಸುದ್ದಿಯೊಂದನ್ನು ಗುರುವಾರ ಪ್ರಕಟಪಡಿಸಲಿದೆ ಎಂದು ಬ್ರಿಟನ್ನ ಸುದ್ದಿವಾಹಿನಿಯೊಂದರ ರಾಜಕೀಯ ವಿಭಾಗದ ಸಂಪಾದಕ ರಾಬರ್ಟ್ ಪೆಸ್ಟನ್ ಹೇಳಿದ್ದಾರೆ.
ಲಸಿಕೆಯ ಬಗ್ಗೆ ಶುಭಸುದ್ದಿ ಬರಲಿದೆ ಎಂದು ಬ್ರಿಟನ್ನ ಸುದ್ದಿವಾಹಿನಿಯೊಂದರ ರಾಜಕೀಯ ವಿಭಾಗದ ಸಂಪಾದಕ ರಾಬರ್ಟ್ ಪೆಸ್ಟನ್ ಅವರು ಬರೆದುಕೊಂಡಿದ್ದು, ಇವರ ಈ ಬರಹವನ್ನು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.
ವಿಶ್ವವಿದ್ಯಾನಿಲಯವು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಈ ಲಸಿಕೆಯು ಹೇಗೆ ಕೆಲಸ ಮಾಡುತ್ತದೆ ಎಂದು ತಿಳಿದುಕೊಳ್ಳುವ ಸಲುವಾಗಿ ಮಾನವನ ಮೇಲಿನ ಪ್ರಯೋಗವನ್ನು ಆರಂಭ ಮಾಡಿದ್ದು, ಆದರೆ, ಇದರ ಒಂದನೇ ಹಂತದ ಪ್ರಯೋಗದ ಫಲಿತಾಂಶವು ಇನ್ನು ಪ್ರಕಟವಾಗಿಲ್ಲ. ಇನ್ನು ಈ ಬಗ್ಗೆ ಹೇಳಿಕೊಂಡಿರುವ ವಿಜ್ಞಾನಿಗಳು, ಇಲ್ಲಿಯವರೆಗೆ ಲಸಿಕೆ ತಯಾರಿಸುವ ನಮ್ಮ ಪ್ರಯತ್ನವು ಪ್ರೋತ್ಸಾಹದಾಯಕವಾಗಿದೆ ಎಂದಿದ್ದಾರೆ.
ರಾಬರ್ಟ್ ಅವರ ಬ್ಲಾಗ್ನಲ್ಲಿ, ಆಸ್ಟ್ರಾಜೆನೆಕಾ ಬೆಂಬಲದೊಂದಿಗೆ ಆಕ್ಸ್ಫರ್ಡ್ ಕೊರೊನಾ ವೈರಸ್ ಲಸಿಕೆಯ ಆರಂಭಿಕ ಪ್ರಯೋಗಗಳ ಕುರಿತು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಬರಲಿದೆ ಎಂಬುದಾಗಿ ನನಗೆ ತಿಳಿದುಬಂದಿದೆ ಎಂದು ಬರೆದುಕೊಂಡಿದ್ದಾರೆ.
ಮಾಡರ್ನಾ ತನ್ನ ಎರಡನೇ ಹಂತದ ಪ್ರಯೋಗವನ್ನು ಮೇ ತಿಂಗಳಲ್ಲಿ ಪ್ರಾರಂಭಿಸಿತು ಮತ್ತು ಜುಲೈ 27 ರಂದು ಮೂರನೇ ಹಂತದ ಪ್ರಯೋಗವನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.